-ಲೇಖನ ಗಿರಿಜಾಶಂಕರ್ ಜಿ ಎಸ್
ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಿಲ್ಲ ಎಲೈ ಮೂರ್ಖ ಶಿಷ್ಯ ಸಮುದಾಯವೇ! ನಿಮಗೇನು ಹುಚ್ಚು ಹಿಡಿದಿದೆ? ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಳುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ನೀಚ ಗುರುವರ್ಗ! ಅಧಮ ಗುರುವರ್ಗ! ಜಗದ್ರೋಹಿ! ನಿನಗೆ ಧಿಕ್ಕಾg! ಪತಿತ ಗುರುವರ್ಗ! ನಿನಗೆ ಧಿಕ್ಕಾರ! ಧಿಕ್ಕಾರ! ನಿಮಗೇನು ಮಾಡಿದರೂ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗುವುದಿಲ್ಲಾ. ಅಘೋರ ನಾಯಕ ನರಕದಲ್ಲಿ ಬೀಳುವಿರಿ. ಅಧಮರೇ ಶೀಘ್ರವಾಗಿ ತೊಲಗಿರಿ ಹೀಗೆ ಇಷ್ಟು ತೀಕ್ಷ್ಣವಾಗಿ ಯಾವ ಹಂಗೂ ಇಲ್ಲದೆ ಮಠ ಹಾಗೂ ಮಠಾಧೀಶರ ಅನೈತಿಕ ಜೀವನವನ್ನು ಕುರಿತು ಬರೆದವರು ಯಾರೋ ಮಠದ ವಿರುದ್ಧ ಹೋರಾಟ ಮಾಡುವರೋ ಅಥವಾ ನಾಸ್ತಿಕ ಮುಖಂಡರೋ ಎಂದು  ಹಲವರಿಗೆ ಅನಿಸಬಹುದು. ಮಠಾಧೀಶರಾಗಿ ಮಠಾಧೀಶರನ್ನು ಎಚ್ಚರಿಸುವ, ಜಾಗೃತಗೊಳಿಸುವ ನಿಟ್ಟಿನಲ್ಲಿ ಅವರ ಮಾತುಗಳು ಗೋಚರವಾಗುತ್ತವೆ.   ಒಬ್ಬ ಮಠಾಧೀಶರಾಗಿ ಮಠಗಳ ಅಂದಿನ ದುರಾಚಾರ, ಅನೈತಿಕ ನಡೆವಳಿಕೆಗಳನ್ನು ನೋಡಿ ಬೇಸತ್ತು ಅವರ ವಿರುದ್ಧ ಬರೆಯುವ ಧೈರ್ಯ ಸಿರಿಗೆರೆಯ ೨೦ನೆಯ ಜಗದ್ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಗಲ್ಲದೆ ಮತ್ತಾರಿಗೆ ಇರಲು ಸಾಧ್ಯ ಹೇಳಿ! ತಮ್ಮ ಆತ್ಮನಿವೇದನೆ ಕೃತಿಯಲ್ಲಿ ಇಂಥ ಸತ್ಯಶೋಧನೆಯ ಅಂತರಾಳದ ನುಡಿಗಳನ್ನು ಪ್ರಾಮಾಣಿಕವಾಗಿ ನಿವೇದಿಸಿಕೊಂಡಿದ್ದಾರೆ. ಅವರ ಈ ಆತ್ಮನೀವೇದನೆ ಕೃತಿ ಮಠದ ಸ್ವಾಮಿಗಳಿಗೆ ಕೈಪಿಡಿಯಾಗಿ ಮೂಡಿಬಂದಿದೆ. ಏಪ್ರಿಲ್ ೨೮ ೧೯೧೪ರಂದು ಬಸವ ಜಯಂತಿಯಂದು ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ೧೯೪೦ರ ಬಸವ ಜಯಂತಿಯಂದೇ ತರಳಬಾಳು ಪೀಠದ ಜಗದ್ಗುರುಗಳಾಗಿ ಸಮಾಜಸೇವಾ ದೀಕ್ಷೆಯನ್ನು ಕೈಗೊಂಡರು. ಆ ಮೂಲಕ ಮಠದ ೨೦ನೆಯ ಜಗದ್ಗುರುಗಳಾಗಿ ಮಠಗಳ ಪರಂಪರೆಯಲ್ಲಿಯೇ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ.ಮಠದ ಆಡಳಿತದ ಚುಕ್ಕಾಣಿ ಹಿಡಿದಾಗ ಸಿರಿಗೆರೆ ಮಠ ದುಗ್ಗಾಣಿ ಮಠವಾಗಿತ್ತು. ಅಂಥ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸುವಲ್ಲಿ ಅವರಲ್ಲಿನ ಕಾಯಕಶ್ರದ್ಧೆ, ದೂರದೃಷ್ಡಿ, ತಾಯ್ತನ, ಸಂಘಟನಾ ಚಾತುರ್ಯ, ನೇರನಿಷ್ಟುರ ನುಡಿ, ಅದಮ್ಯ ವಿಶ್ವಾಸವೇ ಕಾರಣ.೧೨ನೆಯ ಶತಮಾನದ ಕಲ್ಯಾಣದಲ್ಲಿ ಬೆಳಗಿದ ಶರಣ ಧರ್ಮದ ದೀವಿಗೆಯನ್ನು ಸಿರಿಗೆರೆಯ ಪ್ರಣತಿಯಲ್ಲಿ ಬೆಳಗಿಸಿದವರು ಪೂಜ್ಯರು. ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರ ಚಿಂತನೆ, ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದಾ ಕಲ್ಲುಮಳ್ಳುಗಳ ಹಾದಿಯಲ್ಲಿ ಸಾಗಿದ ಧೀಮಂತ ಗುರುಗಳು ಶ್ರೀ ಶಿವಕುಮಾರ ಶ್ರೀಗಳು. ಪ್ರಸ್ತುತ ದಿನಮಾನದಲ್ಲಿ ಒಂದು ಮಠವನ್ನು ಕಟ್ಟುವುದು ಅಷ್ಟು ಕಷ್ಟವಾಗಲಾರದೇನೋ! ಸರ್ಕಾರದ ಅನುದಾನದಿಂದಲೇ ಅನೇಕ ಮಠಗಳು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರಬಹುದು. ಆದರೆ ಕಳೆದ ನಾಲ್ಕು ದಶಕದ ಹಿಂದೆ ಮಠವೆಂದರೆ ಭಕ್ತರಿಗೆ ಏನೂ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲಿ ಇಡೀ ಭಕ್ತಸಮೂಹವನ್ನು ಎಚ್ಚರಿಸಿ ಮಠದ ಕಡೆಗೆ ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಪಟ್ಟ ಕಷ್ಟ, ನೋವು, ನಿಂದನೆ, ಯಾರಿಗೂ ಬಂದಿರಲಾರದೇನೋ! ಆದರೆ ಹಿಡಿದ ಕಾಯಕವನ್ನು ಮಾಡಿಮುಗಿಸುವ ಇಚ್ಛಾಶಕ್ತಿ ಗುರುಗಳಿಗೆ ಇದ್ದುದರಿಂದಲೇ ಸಿರಿಗೆರೆ ಮಠವನ್ನು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿಸಿತು. ಶಿಷ್ಯರು ಮತ್ತು ಮಠದ ನಡುವೆ ಬಾಂಧವ್ಯಕಲ್ಪಿಸಿ ಶಿಷ್ಯರೆಂದರೆ ಸಿರಿಗೆರೆ ಶಿಷ್ಯರಂತೆ ನಡೆದುಕೊಳ್ಳಬೇಕು ಎನ್ನುವ ವಾತಾವರಣವನ್ನು ನಿರ್ಮಿಸಿದರು. ’ಮಠ ನಮಗೇನು ಮಾಡಿದೆ’ ಎಂದು ಆಶಿಸುವ ಜನರೇ ಈ ಸಮಾಜದಲ್ಲ್ಲಿ ತುಂಬಿರುವಾಗ ’ಮಠಕ್ಕೆ ನಾನೇನು ಮಾಡಿದೆ’ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರು ಸಿರಿಗೆರೆ ಮಠಕ್ಕಿದ್ದಾರೆ. ಅದರಂತೆ ಸ್ವಾಮಿಗಳೆಂದರೆ ಸಿರಿಗೆರೆ ಸ್ವಾಮಿಗಳ ಹಾಗೆ ಇರಬೇಕು ಎನ್ನುವಂತೆ ತೋರಿಸಿಕೊಟ್ಟರು. ನಿಸರ್ಗದ ಮುನಿಸಿನಿಂದ ಬರಗಾಲ ಬರಬಹುದೇ ಹೊರತು ಆ ಮಠದ ಶಿಷ್ಯರ ಶ್ರದ್ಧಾ-ಭಕ್ತಿಗೆ ಎಂದಿಗೂ ಬರವೆಂಬುದಿಲ್ಲ. ಹಾಗೆ ನೋಡಿದರೆ ಹಿರಿಯ ಗುರುಗಳಿಗಿಂತ ಮೊದಲು ಆರ್ಥಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಠವದು. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಸದ್ಧರ್ಮ ಸಿಂಹಾಸನವನ್ನು ಅಲಂಕರಿಸಿದ ನಂತರ, ಭಕ್ತರು ನಾಮುಂದು ತಾಮುಂದು ಎಂದು ತನು-ಮನ-ಧನದ ಸೇವೆಯ ಮೂಲಕ ಈ ಬೃಹನ್ಮಠವನ್ನು ಅನ್ವರ್ಥವಾಗಿಯೂ ಬೃಹದಾಕಾರವಾಗಿ ಬೆಳೆಸಿದರು. ‘ಕಾಯ, ಕಾಲ, ಕಾಸಿಗೆ ಮಹತ್ವ ಕೊಡದವನು ಉದ್ಧಾರವಾಗುವುದಿಲ್ಲ’ ಎಂದು ಸಾರುತ್ತಾ ಅದರಂತೆಯೇ ತಾವು ನಡೆದು, ತಮ್ಮ ಶಿಷ್ಯವರ್ಗವೂ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.ಬಹುಶಃ ಭಾರತದಲ್ಲಿ ಸಂವಿಧಾನ ಜಾರಿ ಆಗುವುದಕ್ಕಿಂತ ಮೊದಲೇ ಇಡೀ ರಾಷ್ಟ್ರದಲ್ಲಿ ಜಾತ್ಯತೀತ ಕನಸನ್ನು ಕಂಡು ಅದನ್ನು ನಿಜಗೊಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಶ್ರೀ ಶಿವಕುಮಾರ ಶ್ರೀಗಳು ಮಾತ್ರ ಎಂದು ಹೆಮ್ಮೆಯಿಂದ ಹೇಳಬಹುದು. ಸಹಪಂಕ್ತಿ ಭೋಜನ, ಸಮಾನ ಶಿಕ್ಷಣ, ಅಂತರ್ಜಾತಿ ಶಿಕ್ಷಣದ ಮೂಲಕ ’ಮಾನವಜಾತಿ ತಾನೊಂದೆ ವಲಂ’ ಎನ್ನುವ ಪಂಪನ ನುಡಿಯನ್ನು ನಿಜಗೊಳಿಸಿದರು. ಅದಕ್ಕಾಗಿಯೇ  ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಫಾಪಿಸಿ ಅದರ ಅಡಿಯಲ್ಲಿ ನೂರಾರು ಶಾಲಾಕಾಲೇಜುಗಳನ್ನು ತೆರೆದರು. ಅಲ್ಲಿ  ಓದುವ ಮಕ್ಕಳಲ್ಲಿ  ಸಮಾನತೆಯ ಬೀಜಬಿತ್ತಿದರು. ವ್ಯವಹಾರ ಜ್ಙಾನವಿರುವವನಿಗೆ ವ್ಯಾಪಾರ ಮಾಡು, ಕೃಷಿ ಕೆಲಸದಲ್ಲಿ ಅನುಭವವಿದ್ದರೆ ಒಳ್ಳೆಯ ರೈತನಾಗು, ಚೆನ್ನಾಗಿ ಓದಿ ಉತ್ತಮ ಪದವಿಯನ್ನು ಪಡೆದಿದ್ದರೆ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸು ಎಂದು ಹೇಳುವ ಮೂಲಕ ಬಸಣ್ಣನವರ ಕಾಯಕ ಶ್ರದ್ಧೆಯನ್ನು ಬೆಳೆಸಿದರು. ‘ನೆತ್ತಿಯುಳ್ಳವನು ಓದಬೇಕು, ರಟ್ಟೆಯುಳ್ಳವನು ದುಡಿಯಬೇಕು, ಹೊಟ್ಟೆಯುಳ್ಳವನು ಉಣ್ಣಬೇಕು’ ಎಂದು ಹೇಳುತ್ತಿದ್ದ ಅವರ ಆಶೀರ್ವಾಣಿಯು ಅದೆಷ್ಟೋ ಜನರನ್ನು ಕರ್ತವ್ಯ ಪ್ರಜ್ಞರನ್ನಾಗಿ ಹಾಗೂ ಕ್ರಿಯಾಶೀಲರನ್ನಾಗಿ ಮಾಡಿತು. ಸಮಾಜದಲ್ಲಿ ನಡೆಯುವ ವಿವಾಹ, ಶಿವಗಣಾರಾಧನೆ, ಗೃಹಪ್ರವೇಶ ಇತ್ಯಾದಿ ಯಾವುದೇ ಕಾರ್ಯಕ್ರಮವಿರಲಿ; ಅಲ್ಲಿ ‘ಸರ್ವ ಶರಣ ಸಮ್ಮೇಳನ’ಗಳ ಮೂಲಕ ನಾಡಿನ ಒಳ-ಹೊರಗೆ ಶರಣತತ್ವ ಪ್ರಸಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನ್ಯ ಭಾಷೆಗಳಿಗೂ ಶರಣರ ವಚನಗಳನ್ನು ಭಾಷಾಂತರಿಸಿ ಅನ್ಯ ಭಾಷಿಕರೂ ಶರಣ ಸಾಹಿತ್ಯದ ಮಹತ್ವವನ್ನ್ನು ಮನಗಾಣುವಂತೆ ಮಾಡಿದರು. ಒಂದು ಮಠದ ಪೀಠಾಧಿಪತಿಯಾಗಿ, ಕಾವಿಧಾರಿ ಸ್ವಾಮಿಗಳಾಗಿರುವವರು ಬಹುತೇಕ ಸಂಪ್ರದಾಯವಾದಿಗಳೇ ಆಗಿರುತ್ತಾರೆ. ಜಪ, ತಪ, ನಿತ್ಯ ನೇಮಗಳನ್ನು ಅನುಸರಿಸುತ್ತಾ ಅದನ್ನೇ ಶಿಷ್ಯರಿಗೆ ಬೋಧಿಸುತ್ತಾ ಕುರುಡು ಆಚರಣೆಗೆ ಒಳಗಾದವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ ಸ್ವಾಮಿಗಳಾಗಿ ಪ್ರಖರ ವಿಚಾರವಾದಿಯಾಗಿ, ಮೂಢನಂಬಿಕೆಗಳ ವಿರೋಧಿಯಾಗಿ ಶಿಷ್ಯರನ್ನು ತಿದ್ದುತ್ತಾ ಸರಿದಾರಿಯಲ್ಲಿ ಕರೆದೊಯ್ಯೊವ ಶ್ರೀ ಶಿವಕುಮಾರ ಸ್ವಾಮಿಜಿಯಂಥವರು ಸಿಗುವುದು ವಿರಳವೇ ಸರಿ.      ಒಮ್ಮೆ ದಾವಣಗೆರೆ ನಗರದ ರಾಜನಹಳ್ಳಿ ಹನುಮಂತಪ್ಪ ಛತ್ರದ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. ಆಗ ವಚನಶಾಸ್ತ್ರದ ಪಿತಾಮಹರೆಂದೇ ಖ್ಯಾತರಾದ ಫ ಗು ಹಳಕಟ್ಟಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ತಿರುಗಿ ವಚನಗಳ ಓಲೆಗರಿ, ಕೈಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕವೆಚ್ಚ ಹೆಚ್ಚಾಗಿ ಆಗಿನ ಕೆಸಿಸಿ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಮನೆ ಜಪ್ತಿಗೆ ಬಂದಿತು. ಈ ವಿಷಯ ತಿಳಿದ ಶ್ರೀ ಶಿವಕುಮಾರ ಶ್ರೀಗಳು ಕೂಡಲೇ ಎ ಜಿ ವಿರುಪಾಕ್ಷಪ್ಪ, ಮತ್ತು ಸಿ ಅಂಕಪ್ಪ ಇವರನ್ನು ಸಿರಿಗೆರೆಗೆ ಕಳುಹಿಸಿ ಮಠದ ಏಜೆಂಟ್ ಆಗಿದ್ದ ರುದ್ರಯ್ಯನವರಿಗೆ ಪತ್ರ ಕೊಟ್ಟು ಮಠದಲ್ಲಿದ್ದ ಬಂಗಾರದ ಪದಕವನ್ನು ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವದರೊಳಗಾಗಿ ಫ ಗು ಹಳಕಟ್ಟಿಯನ್ನು ಸನ್ಮಾನಿಸಿ ’ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ. ಇದನ್ನು ಮಾರಿ  ನಿಮ್ಮ ಸಾಲವನ್ನು ತೀರಿಸಿ ಋಣಮುಕ್ತರಾಗಿ, ಶರಣ ಸಾಹಿತ್ಯದ ಸೇವಕರು ಸಾಲಗಾರರಾಗಿ ಈ ರೀತಿ ನೋವನ್ನು ಪಡುವುದು ನಮಗೆ ಇಷ್ಟವಿಲ್ಲ’ ಎಂದು ಆಶೀರ್ವದಿಸಿದರು. ತುಂಬಿದ ಕಣ್ಣು, ಮುಗಿದ ಕೈನಿಂದ ಅದನ್ನು ಸ್ವೀಕರಿಸಿದ ಹಳಕಟ್ಟಿಯವರು ಸಾಲ ತೀರಿಸಿ ಉಳಿದ ಹಣವನ್ನು ಮಠಕ್ಕೆ ತಲುಪಿಸುವುದಾಗಿ ಎಂದು ಹೇಳಿದಾಗ ಸಾಧ್ಯವಿಲ್ಲ, ಅದು ಶರಣ ಸಾಹಿತ್ಯದ ಮೀಸಲು ಎಂದು ಶ್ರೀಗಳು ಹೇಳಿದ್ದರು. ತಮ್ಮ ಜೀನದುದ್ದಕ್ಕೂ ಜಾತಿಮತ ಭೇದವಿಲ್ಲದೆ ಗ್ರಾಮೀಣ ಜನರ ಅಭ್ಯುದಯಕ್ಕಾಗಿ ನಾಲ್ಕು ದಶಕಗಳ ಕಾಲ ಅಹರ್ನಿಷಿ ದುಡಿದು  ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಮುಲಾಗ್ರ ಬದಲಾವಣೆಗೆ ನಾಂದಿ ಹಾಡಿದವರು ಶ್ರೀಗಳವರು. ಕಲ್ಲಾಗಿದ್ದ ಭಕ್ತರನ್ನು ಶಿಲೆಗಳನ್ನಾಗಿ ರೂಪಿಸಿದರು. ಬಿದ್ದವರನ್ನು, ಶೋಷಣೆಗೆ ಒಳಗಾದವರನ್ನು. ದೀನ ದಲಿತರನ್ನು, ಅಜ್ಞಾನದ ಸ್ಥಿತಿಯಲ್ಲಿ ಇರುವವರನ್ನು ಸದಾ ಮೇಲಕ್ಕೆತ್ತುವ ಮೂಲಕ ಸರ್ವ ಜನಾಂಗದ ಕಲ್ಯಾಣಕ್ಕೆ ಶ್ರಮಿಸಿದರು. ತಮ್ಮ ಕಣ್ ಸನ್ನೆ, ಬಾಯ್ ಸನ್ನೆ, ಕೈಸನ್ನೆಯ ಮೂಲಕವೇ ಸಾವಿರ ಸಾವಿರ ಜನರನ್ನು ಒಗ್ಗೂಡಿಸುವ, ಎಚ್ಚರಿಸುವ, ಮೌನರನ್ನಾಗಿಸುವ ಅವರ ವ್ಯಕ್ತಿತ್ವ ಕಲ್ಪನೆಗೂ ನಿಲುಕದ್ದು.ಪೀಠ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ; ಮುಳ್ಳಿನ ಹಾಸಿಗೆಯಾಗಿತ್ತು. ಪೂಜ್ಯರು ಮನಸ್ಸಿದ್ದರೆ ಮಾರ್ಗ ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು. ಯಾವುದೇ ಕಾರ್ಯವಿರಲಿ ಹಣವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಶ್ರೀಗಳು ಹಣವನ್ನು ಎಂದೂ ಹಿಂಬಾಲಿಸಲಿಲ್ಲ; ಇವರು ಕಾರ್ಯ ಸಾಧನೆ ಮಾಡುತ್ತಾ ಹೋದಂತೆ ಹಣವೇ ಇವರನ್ನು ಹಿಂಬಾಲಿಸಿತು.ದೀನದಲಿತರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತ ಅವರ ಬದುಕಿನಲ್ಲಿ ವಿಶ್ವಾಸ ಮೂಡಿಸಿದ ಶಿವಕುಮಾರ ಶ್ರೀಗಳು ಸಮಸ್ತ ಸಮಾಜದ ಜಾಗೃತಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡ ವಾಸ್ತವ ಮಾನವತಾವಾದಿಗಳು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಉನ್ನತಿಗೆ ಹಗಲಿರುಳು ಶ್ರಮಿಸಿ ಸಮಾಜದ ಅಭ್ಯುದಯಕ್ಕೆ ಪಣತೊಟ್ಟು ಸುಂದರ ’ಮಹಾಮನೆ’ಯನ್ನೇ ನಿರ್ಮಾಣ ಮಾಡಿದ ಶ್ರೀಗಳಿಗೆ  ನಾಡು ಎಷ್ಟು ಋಣಿಯಾಗಿದ್ದರೂ ಸಾಲದು. ಜಾತಿಯ ವಿಷಬೀಜ ಎಲ್ಲೆಲ್ಲೂ ಚಿಗುರಿ ’ಗಿರಕಿ’ ಹೊಡೆಯುತ್ತಿದ್ದಾಗ ಮೊತ್ತಮೊದಲು ಕರ್ನಾಟಕದಲ್ಲಿ ಸಹಪಂಕ್ತಿ ಭೋಜನ ಆರಂಭಿಸಿ ಇಂದಿಗೂ ನಿರಂತರತೆ ಉಳಿಸಿದ ಧೀರ ಚೇತನ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳವರು. “ಸಹಪಂಕ್ತಿ ಭೋಜನ ಬೇಡ ಎನ್ನುವುದಾದರೆ ಈ ಪೀಠದ ಜಗದ್ಗುರು ಪಟ್ಟವೇ ನಮಗೆ ಬೇಡ” ಎಂದ ಮಾನವತಾವಾದಿ ಅವರು.ಶ್ರೀಗಳವರನ್ನು ಕುರಿತು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಸೂರ್ಯನನ್ನು ಪರಿಚಯಿಸುತ್ತೇನೆ ಎನ್ನುವುದು ದಡ್ಡತನದ ಮಾತಾಗುತ್ತದೆ. ಕಲೆ, ಸಾಹಿತ್ಯ, ನಾಟಕ, ಶಿಕ್ಷಣ, ಧರ್ಮ, ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಶಾಲಾ-ಕಾಲೇಜುಗಳ ಮುಖಾಂತರ ಅನ್ನದಾನ, ವಿದ್ಯಾದಾನಗಳ ಕ್ರಾಂತಿಯನ್ನು ಮಾಡಿ ನವಸಮಾಜವನ್ನು ಕಟ್ಟಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಇಂದಿನ ವಿಜ್ಞಾನ ಯುಗದಲ್ಲಿಯೂ ಅಡ್ಡಪಲ್ಲಕ್ಕಿ ಇರಲಾರದೆ ನಾವು ಬರುವುದಿಲ್ಲ ಎನ್ನುವ ಸ್ವಾಮಿಜಿಗಳೆತ್ತ, ಅಂದಿನ ಕಾಲದಲ್ಲಿ ಜಗದ್ಗುರುಗಳಾಗಿ ತಾವೇ ಬಂದು ಜನ-ಮನದ ಹೃದಯಾಂತರಾಳದಲ್ಲಿ ಬಸವ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡ ನಿಜವಾದ ಜಗದ್ಗುರು ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳೆತ್ತ!ಇಲ್ಲಿ ದಾಖಲಿಸಬೇಕಾದ ಮತ್ತೊಂದು ಅಂಶ ಅವರ ಸ್ವಯಂ ನಿವೃತ್ತಿ. ಪೀಠವು ಎಂದಿಗೂ ಶಾಶ್ವತವಲ್ಲ, ಅದೊಂದು ಸೇವೆಗೆ ಸಾಧನ ಮಾತ್ರ ಎಂದು ಹೇಳುತ್ತಿದ್ದರು. ಶ್ರೀಗಳವರ ಸ್ವಯಂ ನಿವೃತ್ತಿಯಂತೂ ಜಗತ್ತಿನ ಎಲ್ಲಾ ಧರ್ಮಗುರುಗಳಿಗೆ ಮಾದರಿಯಾಗಿದೆ. ತಮ್ಮ ಸ್ಥಾನಕ್ಕೆ ಸ್ವಯಂ ನಿವೃತ್ತಿ ಘೋಷಣೆ ಮಾಡಿ ಪ್ರಜಾಪ್ರಭುತ್ವ ರೀತಿಯಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದು ಮಠೀಯ ಪರಂಪರೆಗಳಲ್ಲೇ ವಿಶಿಷ್ಟತೆ ಎನ್ನುವಂತಿದೆ. ಒಬ್ಬನೇ ವ್ಯಕ್ತಿ ಒಂದು ಅಧಿಕಾರಸ್ಥಾನಕ್ಕೆ ಜೀವಾವಧಿಯವರೆಗೂ ಅಂಟಿಕೊಳ್ಳುವುದು ಸಂಸ್ಥೆಯ ಬೆಳವಣಿಗೆ ಹಾಗೂ ಭದ್ರತೆಯ ದೃಷ್ಟಿಯಿಂದ ಸರಿಯಲ್ಲವೆಂದು ನಂಬಿ ನಡೆದವರು ಶ್ರೀ ಶಿವಕುಮಾರ ಶ್ರೀಗಳು. ಮಠ-ಪೀಠಗಳು ಸಾರ್ವಜನಿಕ ಸ್ವತ್ತುಗಳಾಗಿರುವಾಗ ಅಧಿಪತಿಯಾದವರಲ್ಲಿ ’ಇದೆಲ್ಲ ತನ್ನದೇ ವೈಯಕ್ತಿಕ ಆಸ್ತಿ’ಯೆಂಬ ಭಾವ ಮೂಡದಂತಿರಬೇಕು ಎನ್ನುವುದು ಶ್ರೀ ಶಿವಕುಮಾರ ಶ್ರೀಗಳವರ ಪಾರದರ್ಶಕ ಬದುಕಿಗೆ ಸಾಕ್ಷಿಯಾಗಿದೆ. ಜೀವನಾಂತ್ಯದವರೆಗೂ ಅಂಥ ಸ್ಥಾನಕ್ಕೆ ಅಂಟಿಕೊಂಡು ಕೂಡುವದು ಸಂಸ್ಥೆಯ ಭವಿಷ್ಯತ್ತಿಗೂ ಸಹಕಾರಿಯಲ್ಲವೆಂದು ಬಗೆದು, ತಮ್ಮ ಅರವತ್ತನೆ ವಯಸ್ಸಿಗೆ ಅಂದರೆ ೧೯೭೪ರಲ್ಲಿ ಶಿಷ್ಯಮಂಡಳಿಯ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ  ಅಧ್ಯಕ್ಷರಿಗೆ ತ್ಯಾಗ ಪತ್ರ ಸಲ್ಲಿಸಿ ನೂತನ ಉತ್ತರಾಧಿಕಾರಿಯ ಆಯ್ಕೆಯನ್ನು ಸಂಘವೇ ತೀರ್ಮಾನಿಸಬೇಕೆಂದು ಹೇಳಿದುದು ಅವರ ಹಿರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಉತ್ತರಾಧಿಕಾರಿಯ ಆಯ್ಕೆಯಲ್ಲಿ ಪೀಠಾಧಿಪತಿಗಳಿಗಿಂತ ಶಿಷ್ಯರದೇ ಬಹುಮುಖ್ಯಪಾತ್ರವೆಂಬ ಅವರ ನಿರ್ಣಯ ನಾಡಿನ ಮಠ-ಮಾನ್ಯಗಳಿಗೆ ಮಾದರಿಯೆಂದೇ ಹೇಳಬೇಕು. ಅಧಿಕಾರಕ್ಕೆ ಅಂಟಿಕೊಳ್ಳದೆ, ಕರ್ತವ್ಯಕ್ಕೆ ವಿಮುಖರಾಗದೆ ಸಮಾಜದ ಒಪ್ಪಿಗೆಯನ್ನು ಪಡೆದು ಸಮರ್ಥರಾದವರನ್ನು ಪೀಠಕ್ಕೆ ಕುಳ್ಳಿರಿಸಿ ಸಂತೋಷಪಟ್ಟರು. ತಮ್ಮ ಉತ್ತರಾಧಿಕಾರಿಯಾಗಿ ಈಗಿನ ಜಗದ್ಗುರುಗಳಾಗಿರುವ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ತಮ್ಮ ಸ್ಥಾನಕ್ಕೆ ಕುಳ್ಳಿರಿಸಿ ತರಳಬಾಳು ಮಠ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವಂತೆ ಮಾಡಿದರು. ಅಲ್ಲದೆ ತಮ್ಮ ಕನಸಿನ ಬಳ್ಳಿಯಾದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾಂii ಮಹಾಸ್ವಾಮಿಗಳನ್ನು ಸಾಣೇಹಳ್ಳಿ ಶಾಖಾಮಠಕ್ಕೆ ಪಟ್ಟ ಕಟ್ಟುವ ಮೂಲಕ ತರಳಬಾಳು ಮಠವನ್ನು ಹೆಮ್ಮರವಾಗಿ ಬೆಳೆಯುವಂತೆ ಮಾಡಿದರು. ಪೂಜ್ಯ ಶ್ರೀ ಪಂಡಿತಾರಾಧ್ಯ ಶ್ರೀಗಳು ಈಗಲೂ ತಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶ್ರೀ ಶಿವಕುಮಾರ ಶ್ರೀಗಳನ್ನು ಕಾಣುತ್ತಿದ್ದಾರೆ. ಆದ್ದರಿಂದಲೇ  ಇಡೀ ಭಕ್ತ ಸಮೂಹ ಶ್ರೀ ಶಿವಕುಮಾರ ಶ್ರೀಗಳ ಛಾಯೆಯನ್ನು ಪಂಡಿತಾರಾಧ್ಯ ಶ್ರೀಗಳಲ್ಲಿ ಕಾಣುತ್ತಿದ್ದಾರೆ.  ಶ್ರೀಗಳವರ ಭೌತಿಕ ಶರೀರ ಅಳಿದಿರಬಹುದು. ಆದರೆ ಅವರ ವ್ಯಕ್ತಿತ್ವ ಜಂಗಮ. ಸಾವಿರ ವರ್ಷ ಕಳೆದರೂ ಅವರ ಚೈತನ್ಯ ಮರೆಯಾಗಲಾರದು. ಇಂದಿಗೂ ಅವರ ಸ್ಮರಣೆ ನಮ್ಮಲ್ಲಿ ಚೈತನ್ಯ ತುಂಬುತ್ತದೆ. ಇದು ಅವರ ಜಂಗಮತ್ವ. ಅವರನ್ನು ಸ್ಮರಿಸಿದಾಗಲೆಲ್ಲಾ ಕಣ್ಣು ಒದ್ದೆಯಾಗುತ್ತದೆ. ಹೀಗೆ ಶ್ರೀಗಳ ಬಗ್ಗೆ ಬರೆಯುತ್ತಾ ಹೋದರೆ ಬತ್ತದ ಒರತೆಯಂತೆ, ವಜ್ರದ ಗಣಿಯಂತೆ ಅನೇಕ ಪಾಠ ಕಲಿಸುವ ಪ್ರಸಂಗಗಳು ನೆನಪಿನ ಬುತ್ತಿಯಿಂದ ಚಿಮ್ಮುತ್ತವೆ.ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬಲ್ಲವರು ಅವರನ್ನು ನೆನೆಯದ ದಿನವೇ ಇಲ್ಲ. ಪೂಜ್ಯರು ೧೯೯೨ ಸೆಪ್ಟೆಂಬರ್ ೨೪ರಂದು ಲಿಂಗೈಕ್ಯರಾಗಿದ್ದರೂ  ಭಕ್ತರ ಅಂತರಾಳದಲ್ಲಿ ಇಂದಿಗೂ ಹೃದಯಸಿಂಹಾಸನಾಧೀಶ್ವರರಾಗಿ ಉಳಿದಿದ್ದಾರೆ.ಭಕ್ತರೆದೆಯಲಿ ಹಣತೆ ಹಚ್ಚಿಭಕ್ತರೇಳಿಗೆಯಲಿ ಬೆಳಕ ಕಂಡುಮಾತಿಗಿಂತ ಕೃತಿಯೆ ಮೇಲೆಂದಭಕ್ತರೆದೆಯ ದಿವ್ಯಪ್ರಭೆಗೆ ನನ್ನದೊಂದು ನುಡಿನಮನ.

 

– ಗಿರಿಜಾಶಂಕರ್ ಜಿ ಎಸ್

ಅಧ್ಯಾಪಕ ಶ್ರೀ ಅಮೃತೇಶ್ವರ ಪ್ರೌಢಶಾಲೆ

ನೇರಲಕೆರೆ, ತರಿಕೆರೆ.ತಾ., ಚಿಕ್ಕಮಗಳೂರು ಜಿಲ್ಲೆ.

ಜಂಗಮವಾಣಿ: 9481670804