ಚಿತ್ರದುರ್ಗ: ಕಲೆ ಕಲಾವಿದರ ಬದುಕು ದಾಖಲೀಕರಣವಾದಾಗ ಮಾತ್ರ ವಿನಾಶದ ಅಂಚಿನಲ್ಲಿರುವ ಜಾನಪದ ಕಲೆಯನ್ನು ಉಳಿಸಲು ಸಾಧ್ಯ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಹೇಳಿದರು.
ಸೃಷ್ಠಿಸಾಗರ ಪ್ರಕಾಶನ ಚಿತ್ರದುರ್ಗ ವತಿಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಲೇಖಕ ಶಶಿಧರ ಉಬ್ಬಳಗುಂಡಿ ಅವರ ಜೀವನ್ಮಾರ್ಗ(ದೂಪಂ ಅಂಜಿನಪ್ಪನವರ ಜೀವನ ಚರಿತ್ರೆ) ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು.
ಮಾನವ ವಿಜ್ಞಾನ-ತಂತ್ರಜ್ಞಾನದ ಕಡೆ ಮುಖಾಮುಖಿಯಾಗಿರುವ ಪ್ರಸ್ತುತ ದಿನಮಾನಗಳಲ್ಲಿ ಮಾನವ ಸಂಬಂಧ ಕಡಿಮೆಯಾಗಿ ಎಲ್ಲವೂ ವ್ಯಾಪಾರೀಕರಣವಾಗುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಉಳಿಯಬೇಕಾದರೆ ಹಣದ ಸಹಾಯಕ್ಕಿಂತ ಕಲಾವಿದರ ಬದುಕನ್ನು ದಾಖಲೀಕರಣಗೊಳಿಸುವ ಕೆಲಸವಾಗಬೇಕು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಅದ್ಬುತ ಕಲಾವಿದರ ಬದುಕು ಗಟ್ಟಿಗೊಳ್ಳಲು ಸಹಕಾರಿಯಾಗಲಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಭಜನೆ ಪದದಲ್ಲಿ ಜ್ಞಾನ, ಬದುಕು, ಅರಿವು, ಮೌಲ್ಯ ಇದೆ. ಎಲ್ಲರೂ ಆಧುನಿಕತೆ, ಪಾಶ್ಚಾತ್ಯ, ವಿದೇಶಿ ಸಂಸ್ಕೃತಿಯ ಕಡೆ ವ್ಯಾಮೋಹಗೊಂಡಿರುವುದರಿಂದ ಜನಪದ ಹಾಳಾಗಿದೆ. ಅಲೆಮಾರಿ ಜನಾಂಗಕ್ಕೆ ಸೇರಿದ ದೂಪಂ ಅಂಜಿನಪ್ಪ ಅವರ ಕಷ್ಟ, ಸುಖ, ನೋವು, ಸಂಕಟ, ಅವಮಾನಗಳೇ ಅವರನ್ನು ಬದುಕನ್ನು ಗಟ್ಟಿಗೊಳಿಸಿದೆ. ಇದೇ ಸಮುದಾಯಕ್ಕೆ ಸೇರಿದ ದರೋಜಿ ಈರಮ್ಮ ನಾಡೋಜ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಂಜಿನಪ್ಪ ಹಾಡುವ ಕಥನ, ಕಾವ್ಯ, ಜಾನಪದ ಹಾಡುಗಳು ದಾಖಲಾಗಬೇಕು. ಮೌಖಿಕ ಕಾವ್ಯಗಳು ಶೈಕ್ಷಣಿಕ ಶಿಸ್ತಿಗೆ ಒಳಪಟ್ಟು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದರಿಂದ ಕಲೆ ಕಾವ್ಯ ಇನ್ನು ಉಳಿದಿದೆ ಎಂದರು.
ಸಮಾಜದ ಕಲ್ಮಶ, ಮಲಿನವನ್ನು ತೊಳೆಯುವ ಶಕ್ತಿ ಜಾನಪದಕ್ಕಿದೆ. ಜನಪದ ಕಲೆಗಳಿಗೆ ತಾರತಮ್ಯವಿದೆ. ಜನಪದ ಕಲಾವಿದರಿಗೆ ಸಿಗಬೇಕಾದ ಮಾಶಾಸನ ಇನ್ನು ಸರ್ಕಾರದಿಂದ ಸಿಗದ ಕಾರಣ ಅವರ ಬದುಕು ಜಟಿಲವಾಗಿದೆ. ಕಲೆ, ಕಲಾವಿದರಿಗೆ ನಿಜವಾದ ಗೌರವ ಸಿಕ್ಕಾಗ ಮಾತ್ರ ಅಕ್ಷರ ಶಾಲೆಗಳೆ ಗೊತ್ತಿಲ್ಲದ ನೂರಾರು ಜನಪದ ಕಲಾವಿದರ ಬದುಕು ಸುಧಾರಣೆಯಾಗಲಿದೆ. ಇದರಿಂದ ಕಲೆಯ ಜೊತೆ ಅಂಜನಿಪ್ಪನವರಂತ ನೂರಾರು ಕಲಾವಿದರ  ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.
ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ಮುರುಘಾಮಠದ ಡಾ.ಶಿವಮೂರ್ತಿ ಶರಣರು ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐ.ಎ.ಎಸ್.ಅಧಿಕಾರಿ ಕೆ.ಅಮರನಾರಾಯಣ ವಹಿಸಿದ್ದರು.
.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಲಲಿತಾಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.ಮುಖ್ಯಸ್ತ ಮೇಘಗಂಗಾಧರನಾಯ್ಕ ಸ್ವಾಗತಿಸಿದರು. ಶರಿಫಾಬಿ ಕಾರ್ಯಕ್ರಮ ನಿರೂಪಿಸಿದರು.
ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಇನ್ನು ಮುಂತಾದವರು ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಲೇಖಕರ ಮಾತು ಶಶಿಧರ ಉಬ್ಬಳಗುಂಡಿ:-
ಲೇಖಕ ಶಶಿಧರ ಉಬ್ಬಳಗುಂಡಿ ಮಾತನಾಡುತ್ತ ಕಲೆ ಎಲ್ಲರನ್ನು ಪ್ರೀತಿಯಿಂದ ಕರೆಯುತ್ತದೆ. ಬದುಕುವ ಮಾರ್ಗ ತೋರಿಸಿ ಆನಂದ ತಂದು ಕೊಡುತ್ತದೆ. ನೈಜತೆಯ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬುದನ್ನು ದೂಪಂ ಅಂಜಿನಪ್ಪ ಅವರು ಮಾದರಿಯಾಗಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಮನುಷ್ಯನ ಬದುಕು ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಎಲ್ಲರೂ ಹಾಕಿಕೊಂಡು ಮಾನವನ ಆಚಾರ, ವಿಚಾರ, ಉಚ್ಚಾರ ಕೆಟ್ಟಿದೆ. ಆಚಾರ ಕೆಟ್ಟಾಗ ಅನಾಚಾರಿಯಾಗುತ್ತಾನೆ. ಬುಡಕಟ್ಟು ಜನಾಂಗದ ಅಲೆಮಾರಿ ಅಂಜಿನಪ್ಪನನ್ನು ಸರ್ಕಾರ ಗುರುತಿಸದಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾಧಿಸಿದರು