ಚಿತ್ರದುರ್ಗ; ಮನುಷ್ಯನು ಒಂದು ಪ್ರಾಣಿಯೇ ಆಗಿದ್ದರೂ ಸಾಹಿತ್ಯ ಮತ್ತು ಕಲೆಗಳು ಅವನನ್ನು ಭಿನ್ನವಾಗಿ ರೂಪಿಸಿವೆ. ಸಾಹಿತ್ಯವು ಹೃದಯ ಪರಿವರ್ತನೆ ಮಾಡಿ ಜೀವನವನ್ನು ತಿದ್ದಿ ರೂಪಿಸುತ್ತದೆ. ಜೀವನದಿಂದ ಸಾಹಿತ್ಯ ಎನ್ನುವುದು ನಿಜವಾದರೂ ಬದುಕನ್ನು ರೂಪಿಸಲು ಸಾಹಿತ್ಯ ಬೇಕೇ ಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸುಪ್ರಸಿದ್ಧ ಸಾಹಿತಿ ಪ್ರೊ. ಟಿ.ಎಸ್ ನಾಗರಾಜ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಚಿತ್ರದುರ್ಗ ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ ಮಹಲಿನಲ್ಲಿ ಭಾನುವಾರ ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಲೇಖನ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಸಂವಿದಾನ ಕೌಶಲ ಅತಿ ಮುಖ್ಯವಾಗಿದ್ದು ಸುಪ್ರಸಿದ್ದ ಸಾಹಿತಿಗಳ ಕೃತಿಗಳನ್ನು ಗಮನವಿಟ್ಟು ಓದಿ ಅದನ್ನು ಗಳಿಸಿಕೊಳ್ಳಬೇಕೆಂದು ನುಡಿದರಲ್ಲದೆ ಸಣ್ಣಕಥಾ ಪ್ರಕಾರವು ಪತ್ರಿಕೆಗಳ ಕೂಸಾಗಿದ್ದು ಅದನ್ನು ಬರೆಯುವವರು ಸಾನೆಟ್ ಕವಿಯಂತೆ ಸಂಕ್ಷಿಪ್ತವಾಗಿ ಬರೆಯಬೇಕು ಎಂದರು. ಬೆಳಗಿನ ಅವಧಿಯಲ್ಲಿ ಸಣ್ಣ ಕತೆ ಕುರಿತು ಕಮ್ಮಟ ನಡೆಸಿದರೆ ಮಧ್ಯಾಹ್ನದ ಅವಧಿಯಲ್ಲಿ ಅವರು ಪ್ರಬಂಧ ಸಾಹಿತ್ಯ ಕುರಿತು ಕಮ್ಮಟವನ್ನು ನಡೆಸಿದರು. ಪ್ರಾತ್ಯಕ್ಷಿಕೆಯೊಂದಿಗೆ ಅವರು ನಡೆಸಿದ ಕಮ್ಮಟ ಬೋಧಪ್ರದವಾಗಿತ್ತು.
ಕಮ್ಮಟವನ್ನು ಉದ್ಘಾಟಿಸಿದ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್ ಕಾಶಿವಿಶ್ವನಾಥ ಶೆಟ್ಟಿ ಅವರು ಐದನೆಯ ಆರ್ಯ ವೈಶ್ಯ ಸಾಹಿತ್ಯ ಸಮ್ಮೇಳನದ ಸಂದರ್ಭದ ನೆನಪುಗಳನ್ನ ಮೆಲುಕು ಹಾಕಿದರಲ್ಲದೆ ಸಾಹಿತ್ಯ ಸಂಬಂಧಿ ಚಟುವಟಿಕೆಗಳಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್ ಸುರೇಶರಾಜು ಮಾತನಾಡಿ ಆರಂಭದ ದಿನಗಳಲ್ಲಿ ಅಂಬೆಗಾಲಿಡುತ್ತಿದ್ದ ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಈಗ ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ನಮ್ಮ ನಗರದ ಹೆಮ್ಮೆ ಎಂದು ನುಡಿದರು.

ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಸಿ.ಕೆ ಲಕ್ಷ್ಮೀನಾರಾಯಣ ಗುಪ್ತ ಮಾತನಾಡಿ ಯಾವುದೇ ಸಂಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಬೆಳೆಸಿಕೊಂಡು ಹೋಗುವುದು ಕಷ್ಟ.. ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಶ್ರಮದಿಂದ ಇಲ್ಲಿಯ ಕಲ್ಲುಗಳು ಅರಳಿ ಹೂವಾಗಿವೆ ಎಂದು ಪ್ರಶಂಸೆ ಮಾಡಿದರಲ್ಲದೆ 25 ಸಾವಿರ ರೂಗಳ ದತ್ತಿ ನಿಧಿಯನ್ನು ನೀಡಿ ಶುಭ ಹಾರೈಸಿದರು.

ಶ್ರೀ ಕನ್ಯಕಾ ಪರಮೇಶ್ವರಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪಿ.ಎಸ್ ನಾಗರಾಜ ಶೆಟ್ಟಿ ಮಾತನಾಡಿ ಚಿತ್ರದುರ್ಗದಲ್ಲಿ ಐದನೆಯ ಆರ್ಯ ಸಾಹಿತ್ಯ ಸಮ್ಮೇಳನ ನಡೆದ ನೆನಪು ಈಗಲೂ ಹಸಿರಾಗಿದೆ, ಸಾಹಿತ್ಯ ಸಂಬಂಧಿ ಚಟುವಟಿಕೆಗಳು ಸದಾ ನಡೆಯುತ್ತಿರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸುಜಾತಾ ಪ್ರಾಣೇಶ್ ಅವರು ಸಾಹಿತ್ಯ ಸಂಬಂಧಿಯಾದ ಅನೇಕ ಚಟುವಟಿಕೆಗಳನ್ನು ಮುಂಬರುವ ದಿನಗಳಲ್ಲೂ ಆರ್ಯವೈಶ್ಯ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಲು ಉದ್ದೇಶಿಸಿದ್ದು ಎಲ್ಲರೂ ಸಹಕಾರ ನೀಡಬೇಕೆಂದರು.

ಟಿ.ವಿ ಸುರೇಶ ಗುಪ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷೆ ಸತ್ಯಪ್ರಭಾ ವಸಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಲ್. ಆರ್ ವೆಂಕಟೇಶ ಕುಮಾರ್ ನಿರೂಪಿಸಿದರು. ರಂಗಲಕ್ಷ್ಮಮ್ಮ ಪ್ರಾರ್ಥನೆಯ ನಂತರ ಸದಾನಂದ ಶೆಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಸುಶೀಲಾ ರಾಮಚಂದ್ರ ವಂದಿಸಿದರು.