ಕೆ.ಪಿ ಸುರೇಶ ಅವರ “ಕಂಡಷ್ಟು ಕಡೆದಷ್ಟು” ಎಂಬ ಕಾವ್ಯರೂಪಿ  ಪ್ರಬಂಧಗಳ ಕೃತಿ ಪ್ರಕಟವಾಗಿದ್ದು  ಈ ಕೃತಿಯಲ್ಲಿ ಅನಾಮಿಕ ಸಜೀವ ವ್ಯಕ್ತಿಗಳ ನೆನಪುಗತೆಗಳಿವೆ.

00ಪೂರ್ವಕ್ಕೆ ಮುಖ ಮಾಡಿ ಲೋಕಾಭಿರಾಮ ಮಾತನಾಡುತ್ತಾ ಕೂತ ಧೃತರಾಷ್ಟ್ರ, ಕುಂತಿ, ಗಾಂಧಾರಿಯರಿಗೆ ಕಾಡ್ಗಿಚ್ಚು ಆವರಿಸುತ್ತಿರುವುದು ಗೊತ್ತಾಗುತ್ತದೆ. ತಪ್ಪಿಸಿಕೊಂಡು ಓಡುವುದಿಲ್ಲ. ದುರಂತಕ್ಕೆ ಎದುರಾಗುತ್ತಾರೆ. ಕೊನೆಗೆ ಅನಾಥರಂತೆ ಸೀದು ಹೋಗುತ್ತಾರೆ. ಸಂಜಯ ಮಾತ್ರ ತಪ್ಪಿಸಿಕೊಳ್ಳುತ್ತಾನೆ. ವ್ಯಾಸರು ಇಂಥದೊಂದು‌ ದೃಶ್ಯವನ್ನು ಮಹಾಭಾರತದಲ್ಲಿ ಚಿತ್ರಿಸಿದ್ದಾರೆ. ಆಲ್ಬರ್ಟ್

ಕಮೂನ ಔಟ್ ಸೈಡರ್ ನಲ್ಲಿ , ಕಾಫ್ಕಾನ ಮೆಟಮಾರ್ಫಸಿಸ್ ನಲ್ಲಿ , ಸಾಫೋಕ್ಲಿಸ್, ಯುರಿಪಿಡೀಸ್ ರ ನಾಟಕಗಳಲ್ಲಿ, ತುರ್ಗೆನೀವ್ ನ ತಂದೆಯರೂ ಮಕ್ಕಳಲ್ಲಿ…. Tragical realism ಎಂಬ ತತ್ವವೊಂದು ತೀವ್ರವಾಗಿ ಕೆಲಸ ಮಾಡಿದೆ. ಪಶ್ಚಿಮದಲ್ಲಿ ಇದು ದೊಡ್ಡ ಪರಂಪರೆ. ಹೋಮರ್ ನಿಂದಲೇ ಶುರುವಾಗುತ್ತದೆ. ಮಹಾಭಾರತದಲ್ಲೂ ಇಂಥದು ಹೇರಳವಾಗಿದೆ.

ಕೆ. ಪಿ ಸುರೇಶರು ಇಂಥದೊಂದು ಥಿಯರಿಯನ್ನು ಆವಾಹಿಸಿಕೊಂಡು “ಕಂಡಷ್ಟು ಕಡೆದಷ್ಟು”ಕೃತಿ ರಚಿಸಿದ್ದಾರೆ. ಲಾಲಿತ್ಯ ಪೂರ್ಣ ಪ್ರಬಂಧಗಳಿಗೆ ವಿರುದ್ಧವಾದ ರಚನೆಗಳಿವು. ಈ ಕೃತಿಯ16 ಕತೆಗಳಲ್ಲೂ ಉಕ್ಕಿ ಹರಿವುದು ವಿಷಾದ ಯೋಗ ಮಾತ್ರ. ಪ್ರಬಂಧಗತೆಗಳನ್ನು ಓದಿದ ಮೇಲೆ ಎಲ್ಲೂ ಸುಳ್ಳು ಹೇಳಿದ್ದಾರೆ ಅನ್ನಿಸುವುದಿಲ್ಲ. ಭಾರತದ ರೈತರ, ಕೂಲಿ ಕಾರ್ಮಿಕರ  ಬದುಕು ಇಂದು ಹಾವನ್ನು ಕೊಂದು ಬಿಸಿಲಲ್ಲಿ ಒಣಗಿ ಹಾಕಿದಂತಾಗಿದೆ.  ದೇಶದ ಬಹುಪಾಲು ರೈತ, ಕೂಲಿ ಕಾರ್ಮಿಕ, ದಲಿತ, ಮುಸ್ಲಿಂ ಕುಟುಂಬಗಳು  ದುರಂತಗಳನ್ನು ಎದುರಿಸಬೇಕಾದ ಅನಿವಾರ್ಯ ಕರ್ಮಗಳು ಎಂದು ಭಾವಿಸಿಯೇ ಬದುಕುತ್ತಿವೆ. “ಕಂಡಷ್ಟು ಕಡೆದಷ್ಟು” ಕೃತಿ  ಆ ರೀತಿಯ ದುರಂತಗಳನ್ನು ಹಿಡಿದು ಪೋಣಿಸಿದ  ಕಲಾಕೃತಿ.  ಶಕ್ತ ಕಾವ್ಯದಷ್ಟು  ಬಿಗಿಯಾದ ಬಂಧ, ನಾಲ್ಕೈದು ಪುಟಗಳಲ್ಲೇ  ಕತೆ ಹೇಳಿ ಮುಗಿಸುವ, ಶಬ್ಧವೊಂದನ್ನೂ ದುಂದು ಮಾಡಬಾರದು ಎಂಬ ಕಾವ್ಯಾತ್ಮಕ ಜಿಪುಣತನದ ಕೃತಿ ಇದು. ತೊಟ್ಟಿಕ್ಕುವ ದುರಂತದ ಹನಿಗಳು ಓದುಗರನ್ನು ನಡುಗಿಸಿಬಿಡುತ್ತವೆ.

ಕಾರಂತರು ಓಡಾಡಿದ‌ ಮಣ್ಣು ಇದು ಎಂದು 13 ವರ್ಷಗಳ ಹಿಂದೆ ನಾನು ಬಂಟಮಲೆಯ ತಪ್ಪಲಲ್ಲಿ ರೋಮಾಂಚನದಿಂದ ಓಡಾಡಿದ್ದೆ. ಪಶ್ಚಿಮ ಘಟ್ಟದ ಪಶ್ಚಿಮ ತಪ್ಪಲಲ್ಲಿರುವ ಬಂಟಮಲೆಯ ಕಿಬ್ಬಿಯಲ್ಲಿ ಸುರೇಶರು ಜೀವಿಸುತ್ತಿದ್ದರು. ಇದಪ್ಪಾ ಸ್ವರ್ಗ ಅಂದ್ರೆ. ಹಾಳು ರೇಜಿಗೆಯ ಕೆಲ್ಸಗಿಲ್ಸಾ ಬಿಟ್ಟು ಇಲ್ಲೇ ಎಲ್ಲಾದ್ರೂ ಗುಡಿಸಲು ಹಾಕ್ಕೊಂಡ್ ಬದುಕಿದ್ರಾಯ್ತು ಅನ್ಸಿತ್ತು. ನಿಧಾನಕ್ಕೆ ಅಲ್ಲಿನ ಗೋಳುಗಳನ್ನು ಕೆ.ಪಿ ಸುರೇಶ್ ಹೇಳುತ್ತಾ ಹೋದರು. ಈಗ ಅವುಗಳನ್ನು ಹಿಡಿದು ಕತೆ ನೆಯ್ದಿದ್ದಾರೆ. ಕೆ.ಪಿ ಸುರೇಶ್‌ ಅವರು ಮಾರ್ಕ್ವೆಜ್ ನ one hundred years of solitude ಅನ್ನು ಮೀರಿಸುವ ಕೃತಿ ರಚಿಸುವ ತಾಕತ್ತಿರುವವರು. ಸರಕಿರುವವರು. ಕೂತು ಬರೆಯಬೇಕಷ್ಟೆ. ಬರೆಯಿರಿ ಎಂದು ನಾವು ಒತ್ತಾಯಿಸೋಣ.