“ಹೊಕ್ಕಳುಬಳ್ಳಿ”
ಕಡುಮಮತೆಯ ಗಿಡಮರಬಳ್ಳಿ
ಪ್ರಾಣಿಕೋಟಿಯ ಹೊಕ್ಕಳು ಬಳ್ಳಿ
ಜೀವರಸವನು ಸಾಗಿಸೋ ಬಳ್ಳಿ
ಕಡಿದರೆ ಮರಣವು ತಿಳುಕೊಳ್ಳಿ.
||ಕಡುಮಮತೆಯ||

ರವಿ-ಧರೆ ಪ್ರೀತಿಗೆ ಜೀವಾಂಕುರಿಸಿ,
ಭುವನದಿ ಜನಿಸಿದ ಪ್ರಥಮ ಸಸಿ,
ಬೆತ್ತಲೆ ಧರಣಿಗೆ ಹಸಿರನು ಉಡಿಸಿ
ಪ್ರಾಣಿ ಜನನಕೆ ವೇದಿಕೆ ರಚಿಸಿದ
||ಕಡು ಮಮತೆಯ||

ಪ್ರಾಣಿಗಳುಸುರಿದ ವಿಷಗಾಳಿಗೆ
ಮನುಜನ ದುಡುಕಿನ ಮಲಿನಕೆ
ವಿಷಧರೆ ಮಾಡಿದ ಮೃಗಗಳಿಗೆ
ವಿಷ ಹೀರುತ ಹಿತಗಾಳಿಯ ನೀಡುವ
||ಕಡು ಮಮತೆಯ||

ಭೂಜಲ ಹೀರಿ, ವಿಷಾನಿಲ ಸೇರಿ
ಹಸಿರೊಡಲೊಳು ರವಿಕಿರಣವು ತೂರಿ
ಅನ್ನವ ಕೂಡಿಸಿ,ಪ್ರಾಣಿಗೆ ವಿತರಿಸಿ
ಕೆಡುಕಿಗೂ ಕಡು ಪ್ರೀತಿಯ ತೋರುವ
||ಕಡು ಮಮತೆಯ||

ದಾಸೇಗೌಡ. ಎಂ.ಆರ್.