ಓ ಹೆಣ್ಣೆ ನೀ ಏಕೆ ಹೀಗೆ?
ಕಷ್ಟ ಎಂದರೆ ಕರಗುವೆ ಕರುಣಾಮಯಿ ಎಂದೆನಿಸಿಕೊಂಡಿರುವೆ
ಅಯ್ಯೋ ಎಂದರೆ ಮರುಗುವೆ ದಯಾಮಯಿ ಎಂದೆನಿಸಿಕೊಂಡಿರುವೆ
ಆದರೆ ಭಾವನೆಗಳ ಸುಳಿಯಲಿ ಸಿಲುಕಿ ನೀ ತೊಳಲಾಡುತ್ತಿರುವೆ

ಓ ಹೆಣ್ಣೆ ನೀ ಏಕೆ ಹೀಗೆ?
ಮಕ್ಕಳ ಸಾಮಾಜೀಕರಣ ಮಾಡುವೆ ತಾಯಿಯೇ ಮೊದಲಗುರು ಎಂದೆನಿಸಿಕೊಂಡಿರುವೆ
ಕುಟುಂಬ ನಿರ್ವಹಣೆಯ ಯಶಸ್ಸು ಗಳಿಸಿ ಗೃಹಲಕ್ಷ್ಮೀ ಎಂದೇ ಕರೆಸಿಕೊಂಡಿರುವೆ
ಆದರೆ ತನ್ನ ಅಂತಸ್ತನ್ನು ಸುಧಾರಿಸಿಕೊಳ್ಳುವಲ್ಲಿ ನೀ ಸೋತಿರುವೆ
ಓ ಹೆಣ್ಣೆ ನೀ ಏಕೆ ಹೀಗೆ?
ಜೈವಿಕ ಭಿನ್ನತೆಗೆ ಸಿಲುಕಿ ಪುರುಷರ ಅಧಿನದಲ್ಲಿ ಬದುಕುತ್ತಿರುವೆ
ಸಾಮಾಜಿಕ ಭಿನ್ನತೆಯ ಸಮಸ್ಯೆಗಳ ಕೊಪದಲ್ಲಿ ಬೆಯುತ್ತಲಿರುವೆ
ಬೇರೆಯವರ ಬದುಕನ್ನು ಕಟ್ಟುವ ನೀನು ನಿನ್ನ ಬದುಕು ಕಟ್ಟಿಕೊಳ್ಳಲಾಗದ ಸ್ಥಿತಿಯಲ್ಲಿರುವೆ

ಓ ಹೆಣ್ಣೆ ನೀ ಏಕೆ ಹೀಗೆ?
ನಿನ್ನ ಸಹನೆಯಿಂದಲಿ ಜಗದ ದೃಷ್ಟಿಯಲಿ ನೀ ದುರ್ಬಲಳಾಗಿರುವೆ
ನಿನ್ನ ಮೌನದಿಂದಲೇ ಜನರ ನೋಟದಲಿ ನೀ ಅಬಲೆಯಾಗಿರುವೆ
ಭಾವನೆಗಳನ್ನು ಮೆಟ್ಟಿನಿಂತಾಗ ಬಹು ಎತ್ತರಕ್ಕೆ ನೀ ಬೆಳೆಯುವೆ
ಆಗ ಹೇಳುವರು, ಆಗ ಹೇಳುವರು
ಓ ಹೆಣ್ಣೆ ನೀ ಹೇಗೆ ಹೀಗೆ?

-ವೀಣಾ.ಕೆ.ಎಸ್.
ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿನಿ, ಸಮಾಜಶಾಸ್ತ್ರಅಧ್ಯಯನ
ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ,
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.