ದಿನಾಂಕ 06-05-1934 ರಲ್ಲಿ ಜನಿಸಿ ತಮ್ಮ 86ನೇ ವಯಸ್ಸಿನಲ್ಲಿ  ಅಂದರೆ ದಿನಾಂಕ 03-08-2020 ರಂದು ಇಹಲೋಕ ತ್ಯಜಿಸಿದ ಶ್ರೀಯುತ ಮಹೇಶ್ವರಪ್ಪ ಅವರು ಸಾಹಿತ್ಯ,ಭಾಷೆ,ಧರ್ಮ ಮತ್ತು ರಾಜಕೀಯ ರಂಗಗಳ ನಡೆಯ ಬಗ್ಗೆ ಕ್ವಚಿತ್ತಾದ ಧೋರಣೆ ಹೊಂದಿದವರಾಗಿದ್ದರು.ಹಾಗೂ ಚಿತ್ರದುರ್ಗ ಜಿಲ್ಲೆಯ ಅನೇಕ ಯುವ ಪ್ರತಿಭೆಗಳ ಸಾಹಿತ್ಯ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದು ಪ್ರೋತ್ಸಾಹಿಸುತ್ತಿದ್ದರು.

ಯಾವುದೇ ಮಾಧ್ಯಮಗಳಲ್ಲಾದರೂ ಸರಿ,ಅಲ್ಲಿ ಕಂಡುಬರುವ ಭಾಷಾ ದೋಷಗಳನ್ನು ತೋರಿಸಿಕೊಟ್ಟು ತಿದ್ದುವ ಕನ್ನಡದ ಮೇಷ್ಟ್ರು ಎಂದೇ ಖ್ಯಾತರಾಗಿದ್ದರು.ಶ್ರೀಯುತ ಮಹೇಶ್ವರಪ್ಪ ಸಾಹಿತಿ,ಬರಹಗಾರರಾಗಿ  ಸರಳ ಸಜ್ಜನಿಕೆಯ  ನಿಸ್ವಾರ್ಥ,ನಿಷ್ಟುರವಾದಿಯಾಗಿದ್ದರು.ವೃತ್ತಿಯಲ್ಲಿ  ಕನ್ನಡ ಉಪನ್ಯಾಸಕರಾಗಿ ನಿವೃತ್ತ ಜೀವನವನ್ನು ನಿರಂತರ ಅಧ್ಯಯನ, ಬರೆವಣಿಗೆಯೊಂದಿಗೆ ಅಪ್ಪಟ ಕನ್ನಡದ ಸಾಹಿತ್ಯಿಕ, ಸಾಮಾಜಿಕ ಸಾಮರಸ್ಯದ ಬದುಕು ನಡೆಸುತ್ತಿದ್ದರು.ರಾಷ್ಟ್ರಕವಿ ಡಾll ಜಿ.ಎಸ್.ಶಿವರುದ್ರಪ್ಪನವರ ಶಿಷ್ಯರಾಗಿದ್ದ ಮಹೇಶ್ವರಪ್ಪ ಒಮ್ಮೆ ಇವರನ್ನು “ಹೌದು ಮೇಲ್ನೋಟಕ್ಕೆ ನನ್ನ ಥರಾನೇ ಕಾಣಿಸ್ತೀರಿ” ಎಂದು ಜಿಎಸ್ಸೆಸ್ ಬೆನ್ನು ತಟ್ಟಿದ್ದನ್ನು  ಸ್ಮರಿಸಿಕೊಳ್ಳುತ್ತಿದ್ದುದು ಅವರ ಮುಗ್ಧತೆಯನ್ನು ಎತ್ತಿ ತೋರಿಸುತ್ತದೆ! ಇವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗರುಗದಹಳ್ಳಿ. ಮೂಲತಃ ರೈತಕುಟುಂಬದವರಾದ ಮಹೇಶ್ವರಪ್ಪ ಅಂದಿನ ಕಾಲಕ್ಕೆ ಅವರ ಕುಟುಂಬದಲ್ಲಿ ತಂದೆಯ ವಿರೋಧದ ನಡುವೆಯೂ ಕನ್ನಡ ಎಂ.ಎ.ಸ್ನಾತಕೋತ್ತರ ಪದವಿ ಪೂರೈಸಿದ್ದ ಏಕೈಕ ಪುತ್ರನೆಂಬ ಹೆಮ್ಮೆ ಅವರ ಊರು ಮತ್ತು ಕುಟುಂಬದ ಲ್ಲಿತ್ತು.ಆ ಎತ್ತರಕ್ಕೇರುವಲ್ಲಿ ಪೋಷಕರ ಶ್ರಮಕ್ಕಿಂತ ಸ್ವತಃ ಇವರ ಪರಿಶ್ರಮ, ಸಾಧನೆಗಳೇ ಪ್ರಮುಖವಾಗಿತ್ತೆಂದು ಆಗಾಗ ತಮ್ಮ ಗೆಳೆಯರ ಮುಂದೆ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ಶಿವಮೊಗ್ಗದಲ್ಲಿ ಪದವಿಪೂರ್ವ ಮತ್ತು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪದವಿ ಓದುತ್ತಿರುವಾಗ ಶಿಕ್ಷಣದ ಶುಲ್ಕ,ಖರ್ಚು ವೆಚ್ಚಗಳನ್ನು ಹೊಂದಿಸಲು ಪರದಾಡುತ್ತಿದ್ದರು.ರೈತಕುಟುಂಬವಾದರೂ ಹೇಳಿಕೊಳ್ಳುವಂಥಾ ಆದಾಯವಿಲ್ಲದ್ದರಿಂದ ಇವರ ಶಿಕ್ಷಣಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದ ಕಾರಣ ಓದಿಗಾಗಿ ಇನ್ನಿಲ್ಲದ ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರು.ಪದವಿ, ಸ್ನಾತಕೋತ್ತರ ಪದವಿಯ ಓದು,ಸಾಧನೆಗಳೆಲ್ಲಾ ಇವರದೇ ಕನಸಾಗಿದ್ದರಿಂದ ಅದನ್ನು ನನಸು ಮಾಡಿಕೊಳ್ಳುವುದು ಕೂಡ ಇವರದೇ ಹೊಣೆಯಾಗಿತ್ತು.ಹಾಗಾಗಿ ಓದಿನುದ್ದಕ್ಕೂ “ವಾರಾನ್ನದ ವಿದ್ಯಾರ್ಥಿಯೇ” ಆಗಿದ್ದರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಕಣ್ಣಂಚು ಒದ್ದೆಯಾಗಿರುತ್ತಿತ್ತು.ಇವರ ವಿದ್ಯಾಗುರುಗಳಾದ ಡಾll ಜಿ.ಎಸ್.ಶಿವರುದ್ರಪ್ಪ,ಪ್ರೊ.ಡಿ.ಎಲ್.ಎನ್.,ಪ್ರೊ.ಕೆ.ವೆಂಕಟರಾಮಪ್ಪ,ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ, ತೀನಂಶ್ರೀ,ಟಿ.ಎಸ್.ಶಾಮರಾಯರು,ಡಾll ಎಲ್.ಬಸವರಾಜು,ದೇ.ಜ.ಗೌಡರು,ಪ್ರೊ.ಎಲ್.ಬಸವರಾಜು,ಡಾll ಎಚ್.ತಿಪ್ಪೇರುದ್ರಸ್ವಾಮಿ ಮುಂತಾದವರನ್ನು ಅತ್ಯಂತ ಪ್ರೀತಿ,ಗೌರವಗಳಿಂದ ಮಾತುಕತೆಯ ಸಂದರ್ಭಗಳಲ್ಲೆಲ್ಲಾ ಸ್ಮರಿಸಿಕೊಳ್ಳುತ್ತಿದ್ದರು.ಇವರ ಸರಳತೆ ಎಷ್ಟಿತ್ತೆಂದರೆ ವಯಸ್ಕರಾದಂದಿನಿಂದ ಇಹಲೋಕ ವ್ಯವಹಾರ ಮುಗಿಸುವವರೆಗೆ ಯಾವತ್ತೂ ಬಣ್ಣದ ಉಡುಗೆ ತೊಡುಗೆಗಳನ್ನು ಧರಿಸಲೇ ಇಲ್ಲ.ಬಿಳಿ,ಖಾದಿ, ಜುಬ್ಬಾ ಪೈಜಾಮ, ಪಂಚೆಗಳೇ ಇವರ ಪ್ರೀತಿಯ ಉಡುಪುಗಳಾಗಿದ್ದವು.

ಇವರ ನಿಧನ ವಯೋಸಹಜ ಎನ್ನಿಸಿದರೂ ವಾಸ್ತವದಲ್ಲಿ ಅದಕ್ಕೆ ಮೂಲ ಕಾರಣ ನಮ್ಮ ವ್ಯವಸ್ಥೆಯೇ ಆಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ನಗರದ ಜೆ.ಸಿ.ಆರ್.ವೃತ್ತದಲ್ಲಿದ್ದ ಹೊಂಡಗುಂಡಿಗಳೇ ಮೂಲ ಕಾರಣ! ನಿತ್ಯವೂ ಅದೇ ಹಾದಿಯಲ್ಲಿ ನಡೆದುಕೊಂಡು ಓಡಾಡುತ್ತಿದ್ದರು.ಆದರೆ ದುರ್ವಿಧಿ ಎನ್ನುವಂತೆ ಅದೊಂದು ದಿನ ಅದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರ ನೊಬ್ಬ ತನ್ನ ವಾಹನ ಗುಂಡಿಗೆ ಬೀಳುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಇವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಇವರ ಸೊಂಟದ ಮೂಳೆ ಮುರಿದಿತ್ತು.ಆದರೂ ಆ ದ್ವಿಚಕ್ರ ಸವಾರ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.ನಂತರ ಸೂಕ್ತ ಚಿಕಿತ್ಸೆ ಪಡೆದಿದ್ದರಾದರೂ ತನ್ನದಲ್ಲದ ತಪ್ಪಿನ ಅನೀರೀಕ್ಷಿತ ಅಪಘಾತದಿಂದಾಗಿ ಅಧೀರರಾಗಿದ್ದರು.ಈ ಲೇಖಕನ ನಿರಂತರ ಸಾಂತ್ವನದ ‌ಸಂದರ್ಭದಲ್ಲಿ ಮಾತ್ರ ಲವಲವಿಕೆಯಿಂದ ಇರುತ್ತಿದ್ದ ಅವರು ಮತ್ತೆ ಯಥಾಪ್ರಕಾರ ಅಧೀರತೆಯನ್ನೇ ಅಪ್ಪಿಕೊಳ್ಳುತ್ತಿದ್ದುದು ಅವರ ಆರೋಗ್ಯದ ಹಿನ್ನಡೆಗೆ ಕಾರಣವಾಗುತ್ತಿತ್ತು. ವಿದ್ಯಾರ್ಥಿ ಜೀವನದಿಂದಲೂ ಸ್ವಯಂ ವಿವೇಚನೆಯಿಂದ,ಶ್ರದ್ಧಾಸಕ್ತಿಗಳಿಂದ ಅವರೇ ಹೇಳುತ್ತಿದ್ದಂತೆ “ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ”ದ ಪರಿಣಾಮವಾಗಿ 1959ರಲ್ಲಿ ಮೊದಲ ಬಾರಿಗೆ ಶಿಕ್ಷಕರಾಗಿದ್ದ ಆಯ್ಕೆಗೊಂಡು ಶಿಕ್ಷಕ ವೃತ್ತಿ ಆರಂಭಿಸಿದ್ದರು.ನಂತರ ತಮಗೆ ಲಭ್ಯವಾದ ಅವಕಾಶಗಳನ್ನು ಬಳಸಿಕೊಂಡು ಮತ್ತೆ ಸ್ನಾತಕೋತ್ತರ ಪದವಿ ಯನ್ನು ಗಳಿಸಿಕೊಂಡು  ಉಪನ್ಯಾಸಕರಾಗಿ ಆಯ್ಕೆಯಾದರು.ನಾಡಿನ ಹಲವೆಡೆ ಸೇವೆ ಲ್ಲಿಸಿದ ನಂತರ ಚಿತ್ರದುರ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದೀರ್ಘ ಸೇವೆ ಸಲ್ಲಿಸಿದ್ದರು.ಇವರು ಅನುವಾದಿಸಿದ ಪ್ರಮುಖ ಕೃತಿಗಳೆಂದರೆ ರೂಸೋ ನ ಸಾಮಾಜಿಕ ಒಡಂಬಡಿಕೆ, ಭಾರತದಲ್ಲಿ ವಿವಾಹ ಮತ್ತು ಕುಟುಂಬ ಪದ್ಧತಿ, ಆಧುನಿಕ ಸಂವಿಧಾನ,ತಾಯಿಯ ಹಾಲಿನ ಮಹತ್ವ,ರ್.ಎಲ್.ಸ್ಟೀವನ್ಸನ್ನನ ಟ್ರೆಷರ್ ಐಲ್ಯಾಂಡ್ ಒಂದು ವಿಮರ್ಶಾತ್ಮಕ ಅಧ್ಯಯನ, ಹಾಗೂ ಸ್ವತಂತ್ರವಾಗಿ ಭಾವಬಿಂದು -ವೈಚಾರಿಕ ಲೇಖನಗಳ ಸಂಗ್ರಹ, ಭಾಷಾಂತರ ಪ್ರವೇಶಿಕೆ ಇವೆರಡೂ ಕೃತಿಗಳು ದ್ವಿತೀಯ ಮುದ್ರಣ ಕಂಡಿವೆ.

ಚಿಂತನ ವಲ್ಲರಿ(ಆಕಾಶವಾಣಿಯ ಲ್ಲಿ ಪ್ರಸಾರವಾದ ಚಿಂತನ-ನಲ್ನುಡಿಗಳ ಸಂಕಲನ,ಹಳೇ ಬೇರು ಹೊಸ ಚಿಗುರು ಕವನ ಸಂಕಲನ ಮಾತ್ರವಲ್ಲದೆ ಚುಟುಕುಗಳ ಸಂಕಲನ (ಅಪ್ರಕಟಿತ)ಶೈಕ್ಷಣಿಕ, ಸಾಹಿತ್ಯಿಕ ಕೃತಿಗಳನ್ನು ರಚಿಸಿದ್ದರು. ಅಲ್ಲದೆ ಡಾll ಜಿ.ಎಸ್ಸೆಸ್,ಬಿ.ಶಿವಮೂರ್ತಿ ಶಾಸ್ತ್ರಿ,ಕಮಗೋಡು ನರಸಿಂಹ ಶಾಸ್ತ್ರಿಗಳು ಪ್ರೊ.ಎಚ್.ಎಸ್.ಹರಿಶಂಕರ್ ಮುಂತಾದ ವಿದ್ವಾಂಸರ ಅಭಿನಂದನ ಗ್ರಂಥಗಳಲ್ಲಿ ಇವರ ವಿದ್ವತ್ಪೂರ್ಣ ಲೇಖನಗಳು ಪ್ರಕಟವಾಗಿವೆ.ಹಾಗೂ ಕನ್ನಡದ ಪ್ರಜಾವಾಣಿ, ವಿಜಯವಾಣಿ, ವಿಜಯಕರ್ನಾಟಕ,ಕನ್ನಡ ಪ್ರಭ ಮುಂತಾದ ದೈನಿಕಗಳಲ್ಲಿ, ಸಾಹಿತ್ಯಿಕ ನಿಯತಕಾಲಿಕೆಗಳಾದ ಪ್ರಬುದ್ಧ ಕರ್ನಾಟಕ, ಪುಸ್ತಕ ಪ್ರಪಂಚ  ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಪತ್ರಿಕೆಗಳ ಜೊತೆಗೆ ಸಿರಿಗೆರೆಯ ಶ್ರೀ ಮಠದ ಮಾಸಪತ್ರಿಕೆಯಲ್ಲದೆ ಅನೇಕ ಸ್ಥಳೀಯ ಪತ್ರಿಕೆಗಳಲ್ಲಿಯೂ,ಅನೇಕ ಗದ್ಯ ಪದ್ಯಗಳೇ ಮೊದಲ್ಗೊಂಡು ಅನುವಾದಿತ ಮತ್ತು ವಿಮರ್ಶಾತ್ಮಕ ಲೇಖನಗಳು ಪ್ರಕಟವಾಗಿವೆ.ಇವರು ಅಪ್ಪಟ ಕನ್ನಡದ ಕಟ್ಟಾಳು, ಭಾಷಾ ಪ್ರೇಮಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಾಹಿತ್ಯ ಸಮ್ಮೇಳನದಲ್ಲಿ ಭಾಷಾ ಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದರು.ಚಿತ್ರದುರ್ಗ ಜಿಲ್ಲಾಡಳಿತ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ 2010ರಲ್ಲಿ ಸನ್ಮಾನಿಸಿತ್ತು.ಕುವೆಂಪು ಅವರ “ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು”ಎಂಬ ಮಾತಿನಲ್ಲಿ ಅಪರಿಮಿತ ಭರವಸೆ ಇಟ್ಟುಕೊಂಡಿದ್ದರು.ಇವರ ಬದಕು-ಬರಹಗಳಲ್ಲಿ ಭಾಷಾ ಶುದ್ಧತೆಗೆ ಮೊದಲ ಆದ್ಯತೆಯಾಗಿತ್ತು.ಬರವಣಿಗೆಯ ಭಾಷೆಯ ಬಗ್ಗೆ ಸದಾ ಎಚ್ಚರವಹಿಸುತ್ತಿದ್ದರು ಮಾತ್ರವಲ್ಲದೆ,ನಿರಂತರ ಅಧ್ಯಯನಶೀಲರೂ ಆಗಿದ್ದರು.ಯಾವುದೇ ಪತ್ರಿಕೆಯಲ್ಲಿ ಅಥವಾ ಪುಸ್ತಕಗಳಲ್ಲಿನ ಮುಖ್ಯಾಂಶಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು.

ತಾವು ಓದುವ ಕೃತಿ ಅಥವಾ ಪಠ್ಯದಲ್ಲಿ ಭಾಷಾ ಅಶುದ್ಧತೆಗಳು ಏನೇ ಕಂಡುಬಂದರೂ ಸಂಬಂಧಪಟ್ಟವರ ಗಮನಸೆಳೆದು ಸರಿಪಡಿಸಲು ಸೂಚಿಸುತ್ತಿದ್ದ ಭಾಷಾ ನಿರ್ಭಿಡೆ ಅವರದ್ದಾಗಿತ್ತು! ಏಕೆಂದರೆ ಅಕ್ಷರಾಭ್ಯಾಸ ಕಲಿತು ಪದವಿ ಗಳಿಸುವುದಷ್ಟೇ ವಿದ್ಯಾಭ್ಯಾಸವಲ್ಲ;ಬದುಕಲ್ಲಿ ವಿನಯಶೀಲತೆ,ವಿವೇಕಗಳನ್ನು ಕಲಿಯುವುದೇ ನಿಜವಾದ ವಿದ್ಯಾಭ್ಯಾಸ ಎಂಬ ಮಹಾಭಾರತದ ಸಂದೇಶಕ್ಕೆ ಅವರೇ ತಾಜಾ ಉದಾಹರಣೆಯಾಗಿದ್ದರು ಎಂದರೆ ಅತಿಶಯೋಕ್ತಿಯಾಗದು.

                    ———

ನುಡಿ ನಮನ-ಚನ್ನಬಸವ ಪುತ್ತೂರು, ಚಿತ್ರದುರ್ಗ

Address:- O/o ACCT,(Audit-1),V.T.Bhavan,

Kelagote, Chitradurga-01

Mob-9481689667