ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕ GBರಲ್ಲಿ ಒಬ್ಬರಾದ ಡಾ.ಲಕ್ಷ್ಮೀಪತಿ ಅವರ ಅಂಬೇಡ್ಕರ್ ವಾದದ ಆಚರಣೆ ಎನ್ನುವ ಹೊಸ ಪುಸ್ತಕ ಬಿಡುಗಡೆಯಾಗುತ್ತಿದೆ.ಮೊದಲಿಗೆ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಲಕ್ಷ್ಮೀಪತಿ ಅವರಿಗೆ ಅಭಿನಂದನೆಗಳು.

ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು, ಹಿಂದುಳಿದ ವರ್ಗದವರು. ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ಅಂಬೇಡ್ಕರ್ ವಾದದ ಕ್ರಿಯಾಚರಣೆ. ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೇವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೆ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ, ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಪುಸ್ತಕ.

ಕಿರಿದರಲ್ಲಿ ಹಿರಿದನ್ನು ಹೇಳುವ ಈ ಕಿರುಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಮನು ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹ ವಿವರಿಸುತ್ತದೆ.

ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ, ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಶ್ರೀ ಪಾರ್ವತೀಶ್ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ. ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ ಮತ್ತು ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ ಎಂದರೂ ತಪ್ಪಾಗಲಾರದು.

ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನು ಹೆಚ್ಚಿಸುತ್ತದೆ.

ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಬರಹಕ್ಕೂ ಗೌರವ  ತಂದಂತಾಗುತ್ತದೆ.

  • ಡಾ. ಅಶೋಕ್ ರಂಜೇರೆ