ನಿಶ್ಯಬ್ಧ ಪ್ರದೇಶ, ಸುತ್ತಲೂ ಮರಗಳಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಿದ್ದ ಅಳಿಲುಗಳು, ಉಪಹಾರದ ಸಮಯದಲ್ಲಿ ಯಾರಿಗೋ ಕಾದು ಕುಳಿತಿದ್ದವು, ಯಾರೋ ಒಬ್ಬ ಮಹಾಶಯ ಬಂದು ಮರದ ಪಕ್ಕದಲ್ಲಿನ ಕಾಂಪೌಂಡ್ ಗೋಡೆ ಮೇಲೆ ಅಕ್ಕಿನುಚ್ಚು, ಅನ್ನ, ಖಾರ ಮುಂತಾದ ಆಹಾರ ಪದಾರ್ಥಗಳನ್ನಿಟ್ಟು ಹೋದರು. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಅಳಿಲುಗಳು ಚಿಂವ್ ಚಿಂವ್ ಸದ್ದು ಮಾಡುತ್ತಾ ತನ್ನ ಬಂಧು ಬಾಂಧವರಿಗೆ ಕರೆ ನೀಡಿ, ಎಲ್ಲಾ ಬಳಗದವರೊಂದಿಗೆ ತನ್ನ ಪುಟ್ಟ ಬಾಲ ಅಲ್ಲಾಡಿಸುತ್ತಾ ಬಂದು, ಆಹಾರ ಸವಿದು, ಪಕ್ಕದಲ್ಲಿದ್ದ ನೀರನ್ನೂ ಕುಡಿದು, ಸಂತಸದಿಂದ ಪುನಃ ತನ್ನ ಸ್ಥಳಕ್ಕೆ ಹಿಂದಿರುಗಿದವು.
ಈ ದೃಶ್ಯ ಸೆರೆಸಿಕ್ಕಿದ್ದು ಕೋಟೆನಾಡಿನ ವಾರ್ತಾ ಇಲಾಖೆ ಕಚೇರಿ ಮುಂಭಾಗ. ಜೋಗಿಮಟ್ಟಿ, ಆಡುಮಲ್ಲೇಶ್ವರ, ಐತಿಹಾಸಿಕ ಕೋಟೆ, ಮುರುಘಾಮಠ, ಚಂದ್ರವಳ್ಳಿ ಸೇರಿದಂತೆ ಕೆಲವು ಉದ್ಯಾನವನ ಹಾಗೂ ಮನೆಗಳ ಪಕ್ಕದಲ್ಲಿ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಇಡುವುದು ಚಿತ್ರದುರ್ಗದಲ್ಲಿ ಸರ್ವೆ ಸಾಮಾನ್ಯವಾಗಿದೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯ ಕೆಲವು ಪ್ರಾಣಿ ಪ್ರಿಯರು ಸಣ್ಣ ಪ್ರಾಣಿಗಳಿಗೆ ಆಹಾರ ನೀಡುವುದರ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದಾರೆ.
ಸಣ್ಣ ಅಥವಾ ಮಧ್ಯಮ ಗಾತ್ರದ ಪ್ರಾಣಿಯಾಗಿದ್ದು, ಜನರ ಮಧ್ಯೆ ಹೆಚ್ಚು ವಾಸಿಸುವ ಅಳಿಲು, ರಾಮನಿಗೆ ಸೇತುವೆ ಕಟ್ಟಲು ತನ್ನ ಕೈಲಾದ ಸಹಾಯ ಮಾಡಿ, ಶ್ರೀರಾಮನಿಂದಲೇ ಮೆಚ್ಚುಗೆ ಪಡೆದಿದೆ ಎಂಬುದನ್ನು ನಾವೆಲ್ಲರೂ ಕೇಳಿರಬಹುದು. ಹೀಗಾಗಿಯೇ ‘ಅಳಿಲು ಸೇವೆ’ ಎಂಬ ಪದ ಜನಜನಿತವಾಗಿದೆ.
ತನ್ನ ವಿಶೇಷತೆಯಿಂದ ಗುರುತಿಸಿಕೊಂಡಿರುವ ಅಳಿಲು, ಮನುಷ್ಯರೊಂದಿಗೆ ಬೆರೆತಿದೆ. ಯಾರಿಗೂ ತೊಂದರೆ ಕೊಡದೇ ತನ್ನ ಆಹಾರ ಹುಡುಕುವುದರಲ್ಲೇ ಸದಾ ತೊಡಗಿರುವ ಪ್ರಾಣಿಯಿದು. ಅಳಿಲು ರಕ್ಷಣೆಗೆ ನಾವೆಲ್ಲರೂ ಪಣ ತೊಡಬೇಕಿದೆ. ಇಲ್ಲವಾದರೇ ಮುಂದಿನ ಪೀಳಿಗೆಗೆ ಕೇವಲ ಛಾಯಚಿತ್ರದ ಮೂಲಕ ಅಳಿಲಿನಂತಹ ಸಣ್ಣ ಪ್ರಾಣಿಗಳನ್ನು ಪರಿಚಯಿಸುವ ದುಸ್ಥಿತಿ ಒದಗಬಹುದು.
ನೀರುನಾಯಿ ಎಂಬ ಜಾತಿಗೆ ಸೇರಿದ ಈ ಅಳಿಲುಗಳ ಮೂಲ ಸ್ಥಳ ಅಮೆರಿಕ. ತೆಳುವಾದ ದೇಹ, ದಟ್ಟವಾದ ಬಾಲ ಹಾಗೂ ದೊಡ್ಡದಾದ ಕಣ್ಣುಗಳನ್ನು ಹೊಂದಿರುವ  ಅಳಿಲುಗಳ ಚರ್ಮ ಮೆತ್ತಗೆ ರೇಷ್ಮೆಯಂತಿದ್ದು, ಇವು ಹೆಚ್ಚಾಗಿ ಮರದ ಮೇಲೆ ವಾಸಿಸುತ್ತವೆ. ಮರಗಳ ಮೊಗ್ಗು, ಕಾಯಿ, ಬೀಜ, ಹಣ್ಣು, ನಾಯಿಕೊಡೆ, ಹಸಿರು ತರಕಾರಿಗಳು, ಹುಲ್ಲು, ಸಣ್ಣ ಹುಳುಗಳು, ಅಕ್ಕಿನುಚ್ಚು ಸೇರಿದಂತೆ ಹಲವು ಇವುಗಳ ಆಹಾರ ಪದಾರ್ಥಗಳಾಗಿವೆ.
ಅಳಿಲುಗಳು ಅವುಗಳ ತಳಿಗೆ ಅನುಗುಣವಾಗಿ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮರಿ ಹಾಕುತ್ತವೆ.  ಅಳಿಲುಗಳು ಈ ನಡುವೆ ಕಣ್ಮರೆಯಾಗಲು ಅನೇಕ ಕಾರಣಗಳಿವೆ. ಅಭಿವೃದ್ಧಿ ನೆಪದಲ್ಲಿ ಗಿಡ ಮರಗಳನ್ನು ಕಡಿಯಲಾಗುತ್ತಿದೆ. ಮರಗಳಿದ್ದ ಜಾಗದಲ್ಲಿ ಬಹುಮಹಡಿಯುಳ್ಳ ಕಟ್ಟಡಗಳು ತಲೆಎತ್ತುತ್ತಿವೆ. ರೈತರ ಜಮೀನಿನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು, ಹೊಲಗಳಲ್ಲಿ ಅಳಿಲುಗಳಿಗೆ ಆಹಾರವಾಗಿದ್ದ, ಸಣ್ಣ ಪುಟ್ಟ ಹುಳುಗಳು ಕಣ್ಮರೆಯಾಗಿದ್ದು, ಅವುಗಳಿಗೆ ಆಹಾರ ದೊರೆಯದಂತಾಗಿದೆ. ಅಳಿಲುಗಳಿಗೆ ಆಹಾರದ ಕೊರತೆ ಹೆಚ್ಚಾಗಿ ಅವು ವಿನಾಶದ ಅಂಚಿನತ್ತ ಸಾಗುತ್ತಿವೆ.
ಅತ್ಯಂತ ಅಗಾಧವಾಗಿ ಕಾಣಸಿಗುತ್ತಿದ್ದ ಅಳಿಲುಗಳು ಮಾನವನ ಅತಿಯಾದ ಆಧುನೀಕರಣದ ಪ್ರಭಾವದಿಂದ ಕಣ್ಮರೆಯಾಗುತ್ತಿವೆ. ಇಂದು ಕಡಿಮೆ ಸಂಖ್ಯೆಯಲ್ಲಿ ಅಳಿಲುಗಳು ಕಾಣುತ್ತಿದ್ದು, ನಾವು ಅವುಗಳ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಬಳುವಳಿ ನೀಡಬೇಕಾಗಿದೆ. ಹೀಗಾಗಿ, ನಾವು ನಮ್ಮ ಮನೆಯ ಮೇಲೆ ಅಥವಾ ಅಕ್ಕ ಪಕ್ಕದಲ್ಲಿ  ಧಾನ್ಯಗಳನ್ನು ಹಾಗೂ ನೀರನ್ನು ನೀಡುವುದರ ಮೂಲಕ ಅವುಗಳ ಆಹಾರ ಕೊರತೆಯನ್ನು ಸ್ವಲ್ಪ ನೀಗಿಸೋಣ ಎನ್ನುತ್ತಾರೆ ವನ್ಯಜೀವಿ ಪ್ರಿಯರಾದ ಎಸ್. ಚಂದ್ರಶೇಖರ್ ಹಾಗೂ ಎಸ್.ಪಿ ಮಂಜುನಾಥ್
ಜನರ ಮಧ್ಯೆಯಿದ್ದು ಸಾಮಾಜಿಕ ಒಡನಾಟ ಹೊಂದಿರುವ ಅಳಿಲಿನಂತಹ ಎಷ್ಟೋ ಪ್ರಾಣಿ ಪಕ್ಷಿಗಳನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅವುಗಳಿಗೆ ಆಹಾರ ನೀಡೋಣ, ಅಲ್ಲದೇ ಪ್ರತಿಯೊಂದು ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ನೀರು ಆಹಾರ ನೀಡುವುದರ ಮೂಲಕ ಅವುಗಳನ್ನು ಉಳಿಸಿ, ಬೆಳೆಸೋಣ. ಅಳಿಲುಗಳ ಉಳಿವಿಗೆ ನಾವೆಲ್ಲರೂ ಅಳಿಲು ಸೇವೆ ನೀಡಿ ಶ್ರಮಿಸೋಣ.

-ಶ್ವೇತಾ. ಜಿ
ಸಂಪರ್ಕ : 7483377648