ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಮೃಗಾಲಯದಲ್ಲಿನ ಕನಿಷ್ಠ ಎರಡು ಗೊರಿಲ್ಲಾಗಳಲ್ಲಿ ಕೂಡ ಕೋವಿಡ್ ೧೯ ಇರುವುದು ದೃಢಪಟ್ಟಿದೆ.

ಮೃಗಾಲಯದಲ್ಲಿನ ಮೂರು ಪ್ರಾಣಿಗಳಲ್ಲಿ ವೈರಸ್ ತಗುಲಿರುವ ಲಕ್ಷಣಗಳು ಕಾಣಿಸುತ್ತಿವೆ. ಲಕ್ಷಣರಹಿತ ಸಿಬ್ಬಂದಿಯ ಮೂಲಕ ಈ ಪ್ರಾಣಿಗಳಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಗವರ್ನರ್ ಗ್ಯಾವಿನ್ ನ್ಯೂಸಮ್ ತಿಳಿಸಿದ್ದಾರೆ.

ಗೊರಿಲ್ಲಾಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಮೊದಲಾಗಿದೆ. ಹುಲಿ ಸೇರಿದಂತೆ ಇತರೆ ಪ್ರಾಣಿಗಳಿಗೆ ಸೋಂಕು ಹರಡಿರುವುದು ಹಿಂದಿನ ಸಂಶೋಧನೆಗಳಲ್ಲಿ ದೃಢಪಟ್ಟಿತ್ತು. ಗೊರಿಲ್ಲಾಗಳು ಒಂದು ಕುಟುಂಬದ0ತೆ ವಾಸಿಸುತ್ತವೆ. ಹೀಗಾಗಿ ಅವುಗಳ ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವುದು ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಬುಧವಾರ ಮೃಗಾಲಯದ ಎರಡು ಗೊರಿಲ್ಲಾಗಳಲ್ಲಿ ಕೆಮ್ಮು ಕಾಣಿಸಿಕೊಂಡಿತ್ತು. ಶುಕ್ರವಾರ ಈ ಗುಂಪಿನ ಗೊರಿಲ್ಲಾಗಳಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯ ಬಳಿಕ ವೈರಸ್ ಇರುವುದು ಪತ್ತೆಯಾಗಿತ್ತು. ಅಮೆರಿಕದ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಲ್ಯಾಬೊರೇಟರಿ ಸೋಮವಾರ ಪಾಸಿಟಿವ್ ಫಲಿತಾಂಶವನ್ನು ದೃಢಪಡಿಸಿದೆ.