ಕಾಬೂಲ್: ಕಾರ್ ಬಾಂಬ್ ಸ್ಫೋಟದಲ್ಲಿ 10 ನಾಗರಿಕರು ಸೇರಿದಂತೆ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ನಡೆದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪ್ರಾಂತ್ಯದ ಮೈವಾಂಡ್ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಬಳಿ ಸ್ಫೋಟ ಸಂಭವಿಸಿದೆ. ತಾಲಿಬಾನ್ ಸೇರಿದಂತೆ ಯಾವುದೇ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಕಳೆದ ಕೆಲವು ವಾರಗಳಿಂದ ಕಂದಹಾರ್ ಹಾಗೂ ನೆರೆಯ ಪ್ರಾಂತ್ಯ ಹೆಲ್ಮಂಡ್‍ನಲ್ಲೂ ಸೇನಾ ಪಡೆಗಳು ಮತ್ತು ತಾಲಿಬಾನ್ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘರ್ಷಣೆ ಬೆನ್ನಲ್ಲೇ ಈ ಬೆಳೆವಣಿಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ದೋಹಾದಲ್ಲಿ ಶಾಂತಿ ಮಾತುಕತೆ ಬಿಕ್ಕಟ್ಟಿನಲ್ಲಿರುವುದರಿಂದ ಕಳೆದ ಮೂರು ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಂಸಾಚಾರವು ಶೇಕಡಾ 50 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.