ಚಿತ್ರದುರ್ಗ : ನಿಂಬೆ ಹಣ್ಣು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿ ಬೆಳೆಯಬಹುದಾಗಿದ್ದು, ಎಲ್ಲೆಡೆ ಸುಲಭವಾಗಿ ಲಭ್ಯವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ನಿಂಬೆ ಹಣ್ಣನ್ನು ಅಡುಗೆಯಲ್ಲಿ ಉಪಯೋಗಿಸುವುದಲ್ಲದೇ ಆರೋಗ್ಯಕ್ಕೆ ಮತ್ತು  ಸೌಂದರ್ಯ ವರ್ಧಕಕ್ಕೂ ಬಳಸಲಾಗುತ್ತದೆ.  ಹಿಂದಿನ ಕಾಲದಿಂದ  ಆಧುನಿಕ ಕಾಲದವರೆಗೆ ನಿಂಬೆಹಣ್ಣನ್ನು ಶುಭ ಕಾರ್ಯಗಳಿಗೂ ಉಪಯೋಗಿಸುವುದನ್ನು ಕಾಣಬಹುದಾಗಿದೆ.

ನಿಂಬೆ ಆಮ್ಲಯುಕ್ತ  ಹಣ್ಣುಗಳಾಗಿದ್ದು, ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಪಾನೀಯವನ್ನು ಕುಡಿಯುವುದರಿಂದ ದೇಹದ ಉಷ್ಣ ಕಡಿಮೆ ಮಾಡುತ್ತದೆ. ಸಿಟ್ರಿಕ್ ಆಮ್ಲ ಮತ್ತು  “ಸಿ” ಜೀವ ಸತ್ವದಿಂದ ಮುಖದ ಸೌಂದರ್ಯ ಹೆಚ್ಚಿಸುವುದಲ್ಲದೇ ದೇಹದ ಕೊಬ್ಬಿನಾಂಶ ಕರಗಿಸುವ ಶಕ್ತಿಯನ್ನು ಹೊಂದಿದೆ.

ಗಂಜನಿಂಬೆಯು ಇದು ನಿಂಬೆಯನ್ನು ಹೋಲುವುದಾದರೂ ಹಣ್ಣಿನ ಗಾತ್ರದಲ್ಲಿ ನಿಂಬೆಗಿಂತ ದಪ್ಪವಾಗಿರುತ್ತದೆ. ಗಜನಿಂಬೆಯ ಮೂಲ ಉತ್ತರ ಭಾರತ. ಈ ಮರವು ಹೆಚ್ಚು ದಷ್ಟಪುಷ್ಟ, ಹಣ್ಣಿನ ಸಿಪ್ಪೆ ಸಡಿಲವಾಗಿರುವುದಿಲ್ಲ. ಇದರ ರುಚಿಯೂ ಹುಳಿಯ ಜೊತೆಗೆ ಕೊಂಚ ಒಗರಾಗಿರುತ್ತದೆ. ಆಕಾರ ಅಂಡದಂತಿದ್ದು, ಇದರಲ್ಲಿ ಗಟ್ಟಿಯಾದ ಮುಳ್ಳುಗಳಿರುತ್ತವೆ. ಎಲೆಗಳ ಬಣ್ಣ ನಸು ಹಸಿರಾಗಿರುತ್ತದೆ. ಎಲೆ ತೊಟ್ಟು ರೆಕ್ಕೆಯಂತೆ ಹರಡಿಕೊಂಡಿದ್ದು, ಹಣ್ಣಿನ ತುದಿ ದಪ್ಪದಾಗಿ ಇರುವುದಲ್ಲದೇ ಅವುಗಳ ಹೂವು ಮಧ್ಯಾರಂಭಿ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.

ಚನ್ನಾಗಿ ನೀರು ಬಸಿದು ಹೋಗುವಂತಹ 2-3 ಮೀ (8-10) ಅಡಿ ಆಳವಾಗಿರುವ ಗೋಡುಮಣ್ಣು ಪ್ರದೇಶಗಳನ್ನು ಈ ಬೆಳೆಗಳಿಗೆ ಆಯ್ಕೆ ಮಾಡಲಾಗುತ್ತದೆ. ನೀರು ನಿಲ್ಲುವ ಪ್ರದೇಶ ಮತ್ತು ಜೌಗು ಭೂಮಿ ಈ ಬೆಳೆಗೆ ಯೋಗ್ಯವಲ್ಲ. ನೀರಾವರಿಯೂ ಅವಶ್ಯವಾಗಿದ್ದು, ಗುಲ್ಬರ್ಗಾ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಹಾಗೂ ಗದಗ್ ಜಿಲ್ಲೆಯಲ್ಲಿ ಈ ಬೆಳೆ ಹೆಚ್ಚು ಬೆಳೆಯಲಾಗುತ್ತದೆ.

ಚಿತ್ರದುರ್ಗ ಜಿಲ್ಲೆಯ ಆರು  ತಾಲ್ಲೂಕಿನಲ್ಲಿಯೂ 100 ರಿಂದ 150 ಎಕರೆ ವಿಸ್ತೀರ್ಣದಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಅದರಲ್ಲೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಬಾಲಾಜಿ ಮತ್ತು ಸ್ಥಳೀಯ ತಳಿಗಳನ್ನು ಬೆಳೆಯಲಾಗುತ್ತಿದೆ.

ತಳಿಗಳು : ಕಾಕಜಿ ನಿಂಬೆ, ಬೀಜರಹಿತ (ತಾಹಿತಿ) ನಿಂಬೆ, ಬಾಲಾಜಿ, ಪ್ರಾ-ಮಾಲಿನಿ, ವಿಕ್ರಮ, ಸಾಯಿಸರಬತಿ ಸೇರಿದಂತೆ ಗಜ ನಿಂಬೆಯಲ್ಲಿ ಇಟಾಲಿಯನ್ ಗಜನಿಂಬೆ, ಲಿಸ್ಬನ್ ಗಜನಿಂಬೆ, ಸೆವೆಲ್ಲೆ ಗಜನಿಂಬೆ, ಯುರೇಕಾ ಇವುಗಳು ನಿಂಬೆ ಹಣ್ಣಿನ ತಳಿಗಳಾಗಿವೆ.

 

ಹವಾಗುಣ ಮತ್ತು ನಾಟಿ ಕಾಲ: ಲಿಂಬೆಗೆ ತೇವಾಂಶಯುಕ್ತ ಉಷ್ಣ ಹವಾಗುಣ ಸೂಕ್ತವಾಗಿದ್ದು, ಕಡಿಮೆ ತಾಪಮಾನ ಮತ್ತು ಬಿರುಗಾಳಿ ಬೀಸುವ ಪ್ರದೇಶಗಳು ಸೂಕ್ತವಾಗಿರುವುದಿಲ್ಲ. ಒಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಜೂನ್- ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಬೇಕು.

 

ಉಪಯೋಗಗಳು : ಆಸಿಡಿಟಿ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ಸಾಮಾನ್ಯವಾಗಿ ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಆಸಿಡಿಟಿ ಎಂದು ಕರೆಯಲಾಗಿದೆ. ಆಸಿಡಿಟಿ ಇಂದ ಹೊಟ್ಟೆಉರಿ ಹೊಟ್ಟೆನೋವು ಕೆಟ್ಟ ಅನಿಲ ಬಿಡುಗಡೆ ಅಥವಾ ಗ್ಯಾಸ್ ಹುಳಿತೇಗು ಇತರೆ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇವುಗಳ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನಿಂಬೆಯಲ್ಲಿ ಲ್ಯಾಕ್ಟಿಕ್ ಆಮ್ಲ ಹೆಚ್ಚಾಗಿದ್ದು, ಇದು ಹೊಟ್ಟೆಯಲ್ಲಿನ ಅತಿಯಾದ ಆಮ್ಲತೆಯನ್ನು ಸರಿಪಡಿಸುತ್ತದೆ.

ಇದು ವಿಟಮಿನ್-ಸಿಯ ಉತ್ತಮ ಮೂಲವಾಗಿದ್ದು, ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್-ಸಿ ಅಧಿಕವಾಗಿರುತ್ತದೆ. ಇದು ಪ್ರಾಥಮಿಕ ಆಂಟಿ ಆಕ್ಸಿಡೆಂಟನ್ನು ಒಳಗೊಂಡಿದೆ.

ವಿಟಮಿನ್-ಸಿ : ಅಗತ್ಯವಾದ ವಿಟಮಿನ್ ಮತ್ತು ಉತ್ಕರ್ಷಣಾ ನಿರೋಧಕ ವಿಟಮಿನ್-ಸಿ ರೋಗ ನಿರೋಧಕ ಕ್ರಿಯೆ ಮತ್ತು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ.

ಪೋಷಾಷಿಯಂ : ಅಧಿಕವಾಗಿರುವ ಆಹಾರವನ್ನು ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆಮಾಡುತ್ತದೆ ಹಾಗೂ ಹೃದಯದ ಆರೋಗ್ಯದ ಮೇಲೆ ಸಾಕಾರಾತ್ಮಕ ಪರಿಣಾಮ ಬೀರುತ್ತದೆ.

ವಿಟಮಿನ್ ಬಿ-6 : ಸಂಬಂಧಿತ ಜೀವಸತ್ವಗಳ ಗುಂಪಾಗಿದ್ದು, ಗುಂಪು-ಬಿ6 ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ತೊಡಗಿದೆ. ಮೇಲಿನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಿಂಬೆಹಣ್ಣಿಗಳ ಹಲವಾರು ಉಪಯುಕ್ತತೆಗಳನ್ನು ಒದಗಿಸುತ್ತದೆ.

ನಿಂಬೆರಸದ ಜೊತೆಯಲ್ಲಿ ಸಿಪ್ಪೆಯಲ್ಲಿಯೂ ಕೂಡ ರೋಗ ನಿರೋಧಕ ಶಕ್ತಿ ಹೊಂದಿದೆ.

ಕ್ಯಾನ್ಸರ್ ನಿರೋಧಕವಾಗಿರುವ ನಿಂಬೆ ಹಣ್ಣಿನ ಸಿಪ್ಪೆ : ನಿಂಬೆ ಹಣ್ಣಿನ ಸಿಪ್ಪೆ ಫೈಬರ್ ಹಾಗೂ ಸಮೃದ್ಧವಾದ ವಿಟಮಿನ್-ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ದ ಹೋರಾಡಲು ನೆರವಾಗುತ್ತದೆ. ನಿಂಬೆ ಹಣ್ಣಿ ಸಿಪ್ಪೆ ಒಣಗಿಸಿ ಪುಡಿಮಾಡಿ, ಜೇಣು ತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ.

ಕೈಎಣ್ಣೆಯಾಗಿದ್ದರೆ : ಎಣ್ಣೆ ಪದಾರ್ಥ ಸೇವಿಸಿದರೇ ಅಥವಾ ಅಡುಗೆ ಮಾಡಿದ ಮೇಲೆ ಕೈಗೆ ಎಣ್ಣೆ ಅಂಟಿಕೊಂಡಿದ್ದರೇ, ನಿಂಬೆ ಹಣ್ಣಿನ ತುಂಡಿನಿಂದ ಕೈಉಜ್ಜಿಕೊಂಡು ತೊಳೆದರೆ ಜಿಡ್ಡು ಮಾಯಾವಾಗುತ್ತದೆ.

ನಿಂಬೆಯ ಸಿಪ್ಪೆಯಲ್ಲಿ ಪೆಸ್ವಿನ್ ಇರುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ಆಂಟಿ ಬ್ಯಾಕ್ಟೀರೀಯಾ ಅಂಶವಿದೆ ಇದು ಚರ್ಮ ಸಮಸ್ಯೆ ದೂರಮಾಡುತ್ತದೆ. ಹಾಗೂ ಮೊಡವೆ ಸಮಸ್ಯೆ ದೂರಮಾಡುತ್ತದೆ.

ಅತಿಯಾಗಿ ಯಾವುದೇ ಪದಾರ್ಥವನ್ನು ಉಪಯೋಗಿಸುವುದು ಉಪಯುಕ್ತವಲ್ಲ. ಅದರಿಂದ ಅಡ್ಡಪರಿಣಾಮ ಉಂಟಾಗಬಹುದು. ಹೀಗಾಗಿ ನಿಂಬೆ ಕೇವಲ ಉಪಯೋಗವಲ್ಲದೇ ಅಡ್ಡ ಪರಿಣಾಮಗಳನ್ನು ಒಳಗೊಂಡಿದೆ. ವಿಶೇಷವಾಗಿ ತಿಳಿಚರ್ಮವನ್ನು ಹೊಂದಿರುವ ಜನರು ಚರ್ಮಕ್ಕೆ ನೇರವಾಗಿ ನಿಂಬೆ ರಸ ಹಚ್ಚುವುದರಿಂದ ಬಿಸಿಲಿನ ಬೇಗೆಯಲ್ಲಿ ಆಗುವಂತಹ ಪರಿಣಾಮ ಬೀರುವ ಸಾದ್ಯತೆ ಇರುತ್ತದೆ.

 

– ದೇವಿ, ಚಿತ್ರದುರ್ಗ :