ಮಳೆಗಾಲ ಆರಂಭವಾಗಿದ್ದು, ಬೀದಿ ಬೀದಿಯಲ್ಲೂ, ಮನೆಯ ಸುತ್ತ ಮುತ್ತ, ಕಾಡು-ಕಣಿವೆ ಪ್ರದೇಶಗಳಲ್ಲಿ ಹಸಿರು ಮರದಲ್ಲಿ ಜೋತುಬಿದ್ದಿರುವ ನೇರಳೆ ಹಣ್ಣುಗಳು, ಒಂದೊಂದಾಗಿ ಬಿಡಿಸಿ ಮಾರಾಟಕ್ಕೆ ಹೊತ್ತು ತರುವ ಜನರು, ಇನ್ನೊಂದೆಡೆ ಮಕ್ಕಳು ನೇರಳೆ ಸವಿದು ತಮ್ಮ ನಾಲಿಗೆ ಬಣ್ಣ ಬದಲಾಗಿರುವುದನ್ನು ಕಂಡು ಸಂತಸ ಪಡುವರು. ಒಗರು, ಸಿಹಿ ಮಿಶ್ರಿತವಾದ ಇದನ್ನು ತಿಂದರೆ ಬಾಯೆಲ್ಲಾ ನೇರಳೆ ಬಣ್ಣ ನೀಡುವ ಹಣ್ಣು. ಜೂನ್ ತಿಂಗಳು ಈ ಹಣ್ಣಿನ ಸುಗ್ಗಿಯ ಕಾಲ. ನೇರಳೆ ಪೌಷ್ಠಿಕಾಂಶಗಳ ಆಗರವೂ ಹೌದು. ನಾವು ಆಯಾ ಕಾಲಕ್ಕೆ ಅನುಗುಣವಾಗಿ ದೊರೆಯುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಕೂಡ ವೃದ್ಧಿಸಿಕೊಳ್ಳಬಹುದು. ಹಾಗಿದ್ದರೆ ಈ ನೇರಳೆ ಹಣ್ಣು ಎಲ್ಲಿ ಬೆಳೆಯಲಾಗುತ್ತದೆ?, ಅದರ ವೈಶಿಷ್ಠ್ಯವೇನು?, ನೇರಳೆ ಹಣ್ಣಿನಲ್ಲಿರುವ ಪೌಷ್ಠಿಕಾಂಶಗಳ ಕುರಿತು ಮಾಹಿತಿ ತಿಳಿಯೋಣ.

ನೇರಳೆ ಬೆಳೆಯನ್ನು ಕರ್ನಾಟಕದ ಮಲೆನಾಡು ಮತ್ತು ಒಣಹವೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದನ್ನು ನೆಡುತೋಪುಗಳಲ್ಲಿ ಬೆಳೆಯದೇ ರಸ್ತೆ ಬದಿಯಲ್ಲಿ ಸಾಲು ಮರವನ್ನಾಗಿ ಬೆಳೆಸಲಾಗುತ್ತದೆ. ಅಲ್ಲದೇ ನೇರಳೆಯನ್ನು ಜೌಗು ಹಾಗೂ ಅತೀ ತೇವವಿರುವ ಪ್ರದೇಶಗಳಲ್ಲೂ ಸಹ ಬೆಳೆಯಬಹುದು. ಆಳವಾದ ಕೆಂಪುಗೋಡು ಮಣ್ಣು ಮತ್ತು ಮರಳು ಮಿಶ್ರಿತ ಫಲವತ್ತಾದ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. ಸುಮಾರು 30 ಮೀ. ಎತ್ತರ ಬೆಳೆಯುವ ನೇರಳೆ ಮರ ‘ಸಿಜಿಗಿಯಮ್ ಕುಮಿನಿ’ ಎಂಬ ಸಸ್ಯವರ್ಗಕ್ಕೆ ಸೇರಿದೆ. ಮೊದಲೆಲ್ಲಾ ರೈತರು ತಮ್ಮ ಹೊಲಗಳಲ್ಲಿ ಬೇಲಿಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು. ರೈತರಿಗೆ ಇದು ಪರ್ಯಾಯ ಬೆಳೆಯಾಗಿದೆ. ಅದೇಕೋ ಇತ್ತೀಚೆಗೆ ಈ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಮಾರ್ಚ್, ಏಪ್ರಿಲ್‍ನಲ್ಲಿ ನೇರಳೆ ಮರ ಹೂ ಬಿಡಲಾರಂಭಿಸುತ್ತದೆ. ನಂತರ ಹಸಿರು ಬಣ್ಣದ ಪುಟ್ಟ ಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವ ಕಾಯಿಗಳು ಬೆಳೆದು ಹಣ್ಣಾಗತೊಡಗಿದಂತೆ ಗಾಢ ನೀಲಿ ಬಣ್ಣವನ್ನು ಹಾಗೂ ತೀವ್ರ ಹೊಳಪನ್ನು ಹೊಂದುತ್ತವೆ.

ಆರೋಗ್ಯದ ಗುಟ್ಟು : ನೇರಳೆ ಹಣ್ಣಿನಲ್ಲಿ ಶರ್ಕರ ಪಿಷ್ಟ, ನಾರು, ಕೊಬ್ಬು, ಪ್ರೋಟೀನ್, ನೀರು ಜೊತೆಗೆ ಎ, ಬಿ ಮತ್ತು ಸಿ ಜೀವಸತ್ವಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಲ್ಲದೇ ಸಸಾರಜನಕ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಖನಿಜಾಂಶಗಳನ್ನು ಸಹ ಹೊಂದಿದೆ. ನೇರಳೆ ಹಣ್ಣಿನಲ್ಲಿ ಔಷಧೀಯ ಗುಣವಿದ್ದು, ಸಿಹಿ ಮೂತ್ರರೋಗಕ್ಕೆ ಔಷಧವಾಗಿ ಉಪಯೋಗಿಸಲಾಗುತ್ತದೆ. ನೇರಳೆ ಎಲೆಗಳನ್ನು ಅಗಿದು ರಸ ಕುಡಿಯುವುರಿಂದ ಅಥವಾ ನೇರಳೆ ಮರದ ತೊಗಟೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಹಾಗೂ ವಸಡಿನ ರಕ್ತ ಸ್ರಾವ ಕಡಿಮೆಯಾಗುತ್ತದೆ.

ನೇರಳೆ ಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ ಅಂಶ ಇದೆ.

ನೇರಳೆ ಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ನೇರಳೆ ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದು. ನೇರಳೆ ಹಣ್ಣಿನಲ್ಲಿರುವ ಹೈಪೋಗ್ಲೈಸೆಮಿಕ್ ಎನ್ನುವ ಗುಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದರಲ್ಲಿ ಜಾಂಬೊಲಿನ್ ಮತ್ತು ಜಾಂಬೊಸೈನ್ ಎಂಬ ಅಂಶಗಳಿದ್ದು, ಇವು ಇನ್ಸುಲಿನ್ ಮಟ್ಟ ಹೆಚ್ಚಿಸಲು ನೆರವಾಗುತ್ತವೆ. ದೇಹದ ಜೀರ್ಣ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ. ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

ಸೌಂಧರ್ಯ ವರ್ಧಕ : ನೇರಳೆ ಬೀಜಗಳನ್ನು ಒಣಗಿಸಿ ಪುಡಿ ಮಾಡಿ, ಅದನ್ನು ಹಾಲಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಶಮನವಾಗುತ್ತವೆ. ನೇರಳೆ ಹಣ್ಣಿನ ರಸಕ್ಕೆ, ನೇರಳೆ ಬೀಜದ ಪುಡಿ, ಅರಿಶಿನ ಬೆರೆಸಿ ಪೇಸ್ಟ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಕಲೆಗಳು ನಿವಾರಣೆಯಾಗುತ್ತವೆ. ನೇರಳೆ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಗಾಯಗಳು ಗುಣವಾಗುತ್ತವೆ.

ನೇರಳೆ ಬೀಜದ ಪುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ ಎರಡು ಹನಿ ಬಾದಾಮಿ ಎಣ್ಣೆ ಹಾಗೂ ರೋಸ್‍ವಾಟರ್ ಹಾಕಿ ಮುಖಕ್ಕೆ ಪೇಸ್ಟ್ ಮಾಡಿ, 15 ನಿಮಿಷಗಳ ನಂತರ ಮುಖ ತೊಳೆಯಬೇಕು. ಮೂರ್ನಾಲ್ಕು ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ನೇರಳೆ ಬೀಜದ ಪುಡಿಗೆ ಕಡ್ಲೆಹಿಟ್ಟು , ಬಾದಾಮಿ ಎಣ್ಣೆ ಹಾಗೂ ರೋಸ್‍ವಾಟರ್ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ, ಸಂಪೂರ್ಣ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ದೂರವಾಗುತ್ತವೆ.

ಇಷ್ಟೆಲ್ಲಾ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುವ ಗುಣವಿರುವ ನೇರಳೆ ಮರಗಳು ಇಂದು ನಮಗೆ ಕಾಣಸಿಗುವುದು ಬೆರಳೆಣಿಕೆಯಷ್ಟು ಮಾತ್ರ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹವನ್ನು ಸಮಸ್ಥಿತಿಯಲ್ಲಿಡಬಹು