ಪಾರೀಶ (ಪಾದರಿ) : ಚರ್ಮರೋಗದಿಂದ ಬಳಲುತ್ತಿರುವವರು ಇದರ ಕಾಯನ್ನು ಸುಟ್ಟು ಬೂದಿಯನ್ನಾಗಿಸಿ ಬಳಸುವರು. ಮೂಲವ್ಯಾದಿ ನಿಯಂತ್ರಣದಲ್ಲೂ ಸಹ ಇದರ ಕಷಾಯ ಉಪಯುಕ್ತವಾಗಿದೆ. ಕೀಲುನೋವಿನ ಸಮಸ್ಯೆಗೂ ಇದು ರಾಮಬಾಣ.

ಮೂರ್ವಾ (ಮಂಜಿನಾರು) : ಎಲೆ ಹಾಗೂ ಕಾಂಡದ ಕಷಾಯವನ್ನು ಕಡಿಮೆ ರಕ್ತ ಇರುವವರು ಸೇವಿಸಿದರೆ, ರಕ್ತ ಶುದ್ಧಿ ಹಾಗೂ ರಕ್ತ ವೃದ್ಧಿಯಾಗುತ್ತದೆ.

ವ್ರಣರೋಪಿಣಿ (ಮುರಿಕೂಡು) : ರಕ್ತಸ್ರಾವವಾಗುವ ಸಂದರ್ಭದಲ್ಲಿ ಇದರ ಎಲೆಯ ರಸವನ್ನು ಗಾಯಕ್ಕೆ ಹಚ್ಚಿದರೆ ರಕ್ತಸ್ರಾವ ನಿಲ್ಲಿಸಬಹುದು.  ಇದನ್ನು ಸೇವಿಸುವುದರಿಂದ ದೇಹದ ಒಳಗಡೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ದೇಹದ ಮೂಳೆ ಮುರಿದ ಸಂದರ್ಭದಲ್ಲಿ ಕಟ್ಟು ಹಾಕಲು ಈ ಸಸ್ಯ ಬಳಸಲಾಗುತ್ತದೆ.

ತುವರಕ (ಗರುಡಫಲ) : ಚರ್ಮರೋಗದ ಚಿಕಿತ್ಸೆಯಲ್ಲಿ ಇದರ ಬೀಜದಿಂದ ತಯಾರಿಸಿದ ತೈಲ ಬಳಸುತ್ತಾರೆ. ಇದನ್ನು ಗಾಯಕ್ಕೆ ಲೇಪಿಸುವುದರಿಂದ ಬೇಗ ಗಾಯ ಗುಣಮುಖವಾಗುವುದಲ್ಲದೇ ಕಲೆಗಳು ಮಾಯವಾಗುತ್ತವೆ. ಇದರ ಎಲೆ ಹಾಗೂ ಹಣ್ಣುಗಳಲ್ಲಿ ಔಷಧೀಯ ಗುಣಗಳಿವೆ.

ಮಾಧಿಫಲ (ಮಾದಾಳ) : ಇದರ ಎಲೆ ಹಾಗೂ ಹಣ್ಣುಗಳಲ್ಲಿ ಔಷಧೀಯ ಗುಣಗಳಿವೆ. ಇದರಲ್ಲಿ ಜೀವಸತ್ವ ಸಿ ಇದ್ದು, ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿದೆ.

ಅಶೋಕ : ಗರ್ಭಾಶಯದ ವ್ಯಾಧಿಗಳಲ್ಲಿ ಬಳಸುತ್ತಾರೆ. ನೋವಿದ್ದ ಜಾಗಕ್ಕೆ ಇದರ ಚಕ್ಕೆ ಅರೆದು ಹಚ್ಚಲಾಗುತ್ತದೆ. ಈ ಸಸ್ಯದ ಹೂವು ಹಾಗೂ ಚಕ್ಕೆಗಳಲ್ಲಿ ಔಷಧೀಯ ಗುಣಗಳಿವೆ.

ತ್ರಿವೃತ್ (ಎಡಮುರಿಕಾಯಿ) : ಅತಿಸಾರ ಬೇದಿ ನಿಯಂತ್ರಿಸುವಲ್ಲಿ ಇದರ ಕಾಯಿಗಳನ್ನು ತೇಯ್ದು ಬಳಸಲಾಗುತ್ತದೆ. ಇದರ ಕಷಾಯ ಕುಡಿಯುವುದರಿಂದ ಮಕ್ಕಳ ಹೊಟ್ಟೆಯಲ್ಲಿ ಹುಳು ಆಗುವುದಿಲ್ಲ. ಯಕೃತ್ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಇದರ ಕಷಾಯ ಸೇವಿಸಬಹುದು.

ಪಾರಂತಿ (ಕೇರಜಿ ಹೂ) : ಇದರ ಹಣ್ಣು ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಈ ಸಸ್ಯದ ಚಿಗುರು ಜಗಿಯುವುದರಿಂದ ಬಿಕ್ಕಳಿಕೆ ನಿಯಂತ್ರಿಸಬಹುದು.

ಚಿತ್ರಕ (ಚಿತ್ರೆಮೂಲ) : ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕಾಮಾಲೆ ರೋಗ ನಿವಾರಣೆ ಈ ಸಸ್ಯದ ಬೇರು ಬಳಸಲಾಗುತ್ತದೆ. ಅಲ್ಲದೇ ಚರ್ಮದ ಬಿಳಿ ಕಲೆಗಳನ್ನು ದೂರಮಾಡಲು ಇದು ಸಹಕಾರಿಯಾಗಿದೆ.

ವಿಕಂಕತ (ಹೆಣ್ಣು ಸಂಪಿಗೆ) : ಯಕೃತ್ ಹಾಗೂ ಮೆದೋಜೀರಕಾಂಗದ ಖಾಯಿಲೆಗಳಲ್ಲಿ ಇದರ ಕಷಾಯವನ್ನು ಬಳಸಬಹುದು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವ ಜಲೋದರ ರೋಗ ನಿಯಂತ್ರಣದಲ್ಲೂ ಸಹ ಇದನ್ನು ಔಷಧವಾಗಿ ಬಳಸಬಹುದು.

ಅಸನ (ಬಂಗೆಮರ) : ಇದರ ಬೀಜ, ಎಲೆ ಹಾಗೂ ಕಾಂಡಗಳಲ್ಲಿ ಔಷಧೀಯ ಗುಣಗಳಿವೆ. ಚಕ್ಕೆಯ ಕಷಾಯ ಮಧುಮೇಹ ಹಾಗೂ ಸ್ಥೂಲಕಾಯ ನಿಯಂತ್ರಿಸುತ್ತದೆ.

ತ್ರಿವೃತ್ (ತಿಗಡೆ) : ಈ ಸಸ್ಯದ ಬೇರುಗಳನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದರ ಬೇರು ಸೇವನೆಯಿಂದ ಮಲಬದ್ಧತೆ ನಿಯಂತ್ರಿಸಬಹುದು.

ಕುಂಭಿ (ದಡ್ಡಲ) : ಇದರ ಬೀಜ, ಎಲೆ, ಚಕ್ಕೆ ಹಾಗೂ ಹಣ್ಣುಗಳಲ್ಲಿ ಔಷಧೀಯ ಗುಣವಿದೆ. ಎಲೆಯಿಂದ ಕಷಾಯ ತಯಾರಿಸಿ, ಸೇವಿಸುವುದರಿಂದ ಕಫಯುಕ್ತ ಕೆಮ್ಮಿನಲ್ಲಿ ಮುಕ್ತಿ ಹೊಂದಬಹುದು.  ಮೂಲವ್ಯಾಧಿ ನಿಯಂತ್ರಿಸುವಲ್ಲಿ ಇದರ ಕಷಾಯ ಪ್ರಮುಖ ಪಾತ್ರವಹಿಸುತ್ತದೆ.