ಆಯುರ್ವೇದದಲ್ಲಿ ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾದ ಔಷಧಿ ಸಸ್ಯಗಳನ್ನು ಪತ್ತೆಮಾಡಲಾಗಿದೆ. ಈ ಸಸ್ಯಗಳಿಂದ ಸರ್ವ ರೋಗಗಳಿಗೂ ಔಷಧಿ ಪಡೆಯಬಹುದು. ಚರಕ ಸಂಹಿತೆ ಹಾಗೂ ಸುಶ್ರುತ ಸಂಹಿತೆಯಲ್ಲೂ ಕೂಡ ಔಷಧಿ ಸಸ್ಯಗಳ ಪ್ರಾಮುಖ್ಯತೆ ಹಾಗೂ ಚಿಕಿತ್ಸಾ ಪದ್ಧತಿಯನ್ನು ವಿವರಿಸಲಾಗಿದೆ.

ಪ್ರಮುಖ ಔಷಧೀಯ ಸಸ್ಯಗಳ ಪ್ರಾಮುಖ್ಯತೆ:

ಪುನ್ನಾಗ (ಸುರಹೊನ್ನೆ)  : ಈ ಸಸ್ಯದಿಂದ ತಯಾರಿಸಿದ ಕಷಾಯ ಸೇವನೆ ಮೂತ್ರ ಸರಾಗವಾಗಿ ಹೋಗಲು ಸಹಕಾರಿಯಾಗುತ್ತದೆ.  ಹೆಚ್ಚು ರಕ್ತಸ್ರಾವದ ಸಂದರ್ಭದಲ್ಲಿ ಈ ಸಸ್ಯದ ಹೂವಿನ ರಸವನ್ನು ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು. ಹೂವಿನ ಕೇಸರವನ್ನು ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು.

ಲಕೋಚ (ಜೀಗುಜ್ಜಿ) : ಈ ಸಸ್ಯ ಕಾಂಡದ ರಸವನ್ನು ಸುಟ್ಟಗಾಯ ಬೊಬ್ಬೆಗಳಿಗೆ ಲೇಪಿಸುವುದರಿಂದ, ಬೊಬ್ಬೆ ದೂರವಾಗುತ್ತವೆ. ಇದರ ಹಣ್ಣುಗಳಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಆರೋಗ್ಯ ವೃದ್ಧಿಸಬಹುದು.

ತ್ವಕ್ (ಡಾಲ್ಚಿನ್ನಿ) : ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಚಕ್ಕೆಯ ಪುಡಿಯನ್ನು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ, ಚರ್ಮಕ್ಕೆ ಲೇಪಿಸುವುದರಿಂದ ಚರ್ಮದ ಕಲೆಗಳು ನಿವಾರಣೆಯಾಗುತ್ತವೆ.

ತಿನಿಶ (ಬೆಟ್ಟದ ಹೊನ್ನೆ) : ಇದರ ಕಷಾಯ ಸೇವನೆಯಿಂದ ದೇಹದ ತೂಕ ಹಾಗೂ ಮಧುಮೇಹ ನಿಯಂತ್ರಿಸಬಹುದು. ಚರ್ಮದಲ್ಲಿನ ಬಿಳಿ ಕಲೆಗಳಿಗೆ ಚಕ್ಕೆ ಕಷಾಯ ಲೇಪಿಸುವುದರಿಂದ ಬಿಳಿ ಕಲೆಗಳು ದೂರವಾಗುತ್ತವೆ.