ಚಿತ್ರದುರ್ಗ : ಬೇಸಿಗೆಯಲ್ಲಿ ಬಿರುಬಿಸಿಲಿನ ತಾಪಕ್ಕೆ ನಾವೆಲ್ಲಾ ಸುಸ್ತಾಗೋಗ್ತಿವಿ.. ಇಂಥ ಟೈಮಲ್ಲಿ ನಮ್ಮ ಲೈಫ್ ಸ್ಟೈಲ್ ಚೇಂಜ್ ಆಗ್ಲೇಬೇಕು…!! ಬಿಸಿಲಿನಿಂದ ರಕ್ಷಣೆ ಪಡೆಯೋದು ಹೇಗೆ? ಎಳನೀರಿನ ಮಹತ್ವ ಏನು? ದೇಹದಲ್ಲಿ ನೀರಿನ ಅಂಶವನ್ನು ಹೇಗೆಲ್ಲಾ ಕಾಯ್ದಿಟ್ಟುಕೊಳ್ಳಬೇಕು? ಯಾವ ಯಾವ ವಿಧಾನಗಳನ್ನು ಈ ಬೇಸಿಗೆಯಲ್ಲಿ ಅನುಸರಿಸಿದರೆ ದೇಹಕ್ಕೆ ತಂಪು, ಎನ್ನುವುದರ ಒಂದಿಷ್ಟು ಮಾಹಿತಿ ತಿಳಿಯೋಣ.

ಈ ಉರಿಬಿಸಿಲಿನ ಬೇಸಿಗೆಯಲ್ಲಿ ಎಲ್ಲಿ ನೋಡಿದರೂ ಎಳನೀರಿನದ್ದೇ ದರ್ಬಾರು. ಈ ಸಮಯದಲ್ಲಿ ಎಳನೀರು ಕೊಟ್ಟರೇ ಬೇಡ ಅನ್ನೋರುಂಟೆ. ಅಲ್ಲದೇ ಅದರ ಸ್ವಾದ ಹೀಗೆ ಇರಬೇಕು ಅಂತ ಬಯಸ್ತೀವಿ, ಅದರ ಸಿಹಿ ಅನುಭವಿಸಬೇಕು ಎಂಬುದೇ ಎಲ್ಲರ ಬಯಕೆ. ಎಳನೀರು ದಾಹ ತಣಿಸುತ್ತದೆ, ನಿಶ್ಯಕ್ತಿ ಹೋಗಲಾಡಿಸಿ, ದೇಹದಲ್ಲಿ ಹೊಸ ಹುರುಪು ಮೂಡಿಸುತ್ತದೆ. ಇದಕ್ಕೆ ಸರಿಸಾಟಿ ಶಕ್ತಿ ಜಲ ಯಾವುದೂ ಇಲ್ಲ. ನಮ್ಮ ಹಿರಿಯರು ಎಳನೀರಿಗೆ ಪೂಜನೀಯ ಭಾವವಿತ್ತು, ಅದನ್ನು ಕಲ್ಪತರು ಎಂದು ಕರೆದಿದ್ದಾರೆ.

ಎಳನೀರಿನ ಉಪಯೋಗಗಳು :

ಎಳನೀರಿನ ಉಪಯೋಗ ಹತ್ತು ಹಲವಾರು. ಒಂದು ಎಳನೀರಿನಿಂದ ಹಲವಾರು ಪೋಷಕಾಂಶಗಳು ದೇಹ ಸೇರಿ, ನಮ್ಮ ಶರೀರವನ್ನು ಸುಸ್ಥಿತಿಯಲ್ಲಿಡಲು ಸಹಕರಿಸುತ್ತದೆ. ಇದು ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಸಾಕಷ್ಟು ಖನಿಜ, ಲವಣ ಮತ್ತು ಸಕ್ಕರೆ ಅಂಶವನ್ನು ಹೊಂದಿದೆ. ದೈಹಿಕ ಚಟುವಟಿಕೆಯಿಂದ ನಮ್ಮ ದೇಹದಲ್ಲಿ ನಷ್ಟವಾಗುವ ಸೋಡಿಯಂ ಮತ್ತು ಪೋಟಾಷಿಯಂನ್ನು ಕೂಡ ಸುಸ್ಥಿತಿಯಲ್ಲಿಡಲು ಇದು ಸಹಕರಿಸುತ್ತದೆ. ಹಾಗಾಗಿ ಹೆಚ್ಚು ಸುಸ್ತಾದಾಗ ಎಳನೀರಿನ ಮೊರೆ ಹೋಗುತ್ತೇವೆ. ವಾಂತಿ, ಭೇದಿ ಹಾಗೂ ಅಜೀರ್ಣದಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯರು ಸೂಚಿಸುವ ಮೊದಲ ಆಹಾರವೇ ಎಳನೀರು.

ಚರ್ಮದ ಸುಕ್ಕು ನಿಯಂತ್ರಣ :

ಎಳನೀರಿನಲ್ಲಿರುವ ಪೌಷ್ಠಿಕಾಂಶ ಚರ್ಮದ ಸುಕ್ಕನ್ನು ತಡೆಗಟ್ಟುತ್ತದೆ. ಇಡೀ ದೇಹಕ್ಕೆ ಎಳನೀರು ಹಚ್ಚಿಕೊಂಡ್ರೆ ಅದು ಒಂದು ರೀತಿ ಕೋಲ್ಡ್ ಕ್ರೀಮ್ ತರಹ ಕಾರ್ಯನಿರ್ವಹಿಸಿ, ದೇಹದ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಎಣ್ಣೆ ಚರ್ಮದವರು ಕೂಡ ಇದನ್ನು ಉಪಯೋಗಿಸುವುದರಿಂದ ದೇಹದ ಜಿಡ್ಡು ಕಡಿಮೆಯಾದ ಅನುಭವ ನೀಡುತ್ತದೆ. ಜೊತೆಗೆ ಜೀವಕೋಶಗಳ ಅನಿಯಂತ್ರಿತ ವಿಭಜನೆಯನ್ನು ತಡೆಹಿಡಿಯುವ ಸಾಮಥ್ರ್ಯ ಇದಕ್ಕಿದೆ.

ಸುಗಮ ರಕ್ತ ಸಂಚಾರ :

ಎಳನೀರು ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿರುತ್ತದೆ.  ಇದಕ್ಕೆ ಕಾರಣ ಎಳನೀರು, ಹೃದಯದಲ್ಲಿ ರಕ್ತ ಸಂಚಾರ ಸುಗಮವಾಗಿಸಿ, ಅದರ ನಾಳಗಳಲ್ಲಿ ಕೆಟ್ಟ ಕೊಬ್ಬು ಶೇಖರಣೆಯಾಗುವುದನ್ನು ತಡೆದು, ಒಳ್ಳೆ ಕೊಬ್ಬಿನ ಅಂಶ ಹೆಚ್ಚು ಮಾಡುವುದರ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸೇವನೆ ಕಡ್ಡಾಯ. ನಮ್ಮ ದೇಹದಲ್ಲಿನ ಗ್ಲೂಕೋಸ್ ಅಂಶ ಕರಗಲು ಹಾಗೂ ಉತ್ಪಾದನೆಯಾದ ಇನ್ಸುಲಿನ್ ಪೂರ್ತಿ ಕೆಲಸ ಮಾಡಲು ಎಳನೀರು ಸಹಕರಿಸುತ್ತದೆ.

ರಕ್ತದೊತ್ತಡದಿಂದ ಬಳಲುತ್ತಿರುವವರು ದಿನಂಪ್ರತಿ ಬೆಳಿಗ್ಗೆ ಒಂದು ಎಳನೀರು ಕುಡಿದರೇ ಸಾಕು ಅವರ ದೇಹದಲ್ಲಿ ಸೋಡಿಯಂ ಮತ್ತು ಪೋಟಾಷಿಯಂ ಖನಿಜಾಂಶಗಳಲ್ಲಿ ಸಮತೋಲನ ಉಂಟಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ :

ಎಳನೀರಿನಲ್ಲಿರುವ ಫೋಲಿಕ್ ಆಮ್ಲ, ಪಾಸ್ಪೇಟೆಸ್ ಹಾಗೂ ಪೆರಾಕ್ಸಿಡೇಸ್ ಮುಂತಾದ ಲವಣಾಂಶಗಳು ನಮ್ಮ ದೇಹದಲ್ಲಿನ ಕಿಣ್ವಗಳು ವೃದ್ಧಿಸಲು ಸಹಕರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಎಳನೀರಿನಲ್ಲಿರುವ ಪೋಟಾಷಿಯಂ, ಸ್ನಾಯುಸೆಳೆತ ಕಡಿಮೆಗೊಳಿಸುತ್ತದೆ. ಎಳನೀರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳನ್ನು ವೃದ್ಧಿಸಲು ಹಾಗೂ ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಹೊಟ್ಟೆಉಬ್ಬರ, ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡು ಉಸಿರಾಟಕ್ಕೆ ತೊಂದರೆಯುಂಟಾದಾಗ ಎಳನೀರು ಸೇವನೆ ಅತ್ಯಗತ್ಯ. ಇದರಿಂದ ದೇಹದಲ್ಲಿನ ಕೆಟ್ಟ ವಾಯು, ತೇಗು ಅಥವಾ ಆಕಳಿಕೆಯ ಮೂಲಕ ದೇಹದಿಂದ ಆಚೆ ದಬ್ಬುತ್ತದೆ. ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದಾಗ ಎಳನೀರು ಕುಡಿಯುವುದರಿಂದ ದೇಹ ಆರಾಮದಾಯಕವಾಗಿರುತ್ತದೆ.

ಮಾನಸಿಕ ಒತ್ತಡ ನಿಯಂತ್ರಣ :

ಇಂದಿನ ಆಧುನೀಕರಣ ಜೀವನದಲ್ಲಿ ಒತ್ತಡ ಅನ್ನೋದು ಸರ್ವೇಸಾಮಾನ್ಯ. ಇದರಿಂದ ಉಂಟಾಗುವ ಮಾನಸಿಕ ಸಮಸ್ಯೆಗಳು ಒಂದೆರಡಲ್ಲ. ಹಾಗಾಗಿ, ಎಳನೀರಿನಲ್ಲಿರುವ ವಿಟಮಿನ್-ಬಿ ನಮ್ಮ ಮಾನಸಿಕ ಒತ್ತಡ ತಕ್ಕ ಮಟ್ಟಿಗೆ ನಿಯಂತ್ರಿಸಿ, ದೇಹ ಹಾಗೂ ಮನಸ್ಸು ತಂಪಾಗಿಸುತ್ತದೆ

ತೂಕ ಇಳಿಕೆಗೆ ಸಹಕಾರಿ : ವಾರದಲ್ಲಿ ಒಂದು ದಿನ ಬರೀ ಎಳನೀರು ಕುಡಿದು ಉಪವಾಸ ಮಾಡಿದರೆ, ದೇಹದಲ್ಲಿನ ಅನಗತ್ಯ ತೂಕವೆಲ್ಲಾ ನಿರ್ನಾಮವಾಗುತ್ತದೆ. ಮೂತ್ರಪಿಂಡದ ಕಾರ್ಯಕ್ರಮತೆ ಹೆಚ್ಚಾಗುತ್ತದೆ. ಮಕ್ಕಳು ಎಳನೀರು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳು ನಿವಾರಣೆಯಾಗುತ್ತವೆ.

ಸೌಂದರ್ಯ ವರ್ಧಕ :

ಎಳನೀರನ್ನು ಮುಖಕ್ಕೆ ಲೇಪನ ಮಾಡಿದರೆ, ಚರ್ಮ ನಯವಾಗಿ, ಹೊಳಪಾಗುತ್ತೆ. ಇದರ ಜೊತೆ ಸ್ವಲ್ಪ ಶ್ರೀಗಂಧ ಹಾಗೂ ಅರಿಶಿಣ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಹೊಳಪು ಹೆಚ್ಚಾಗುತ್ತದೆ. ಮುಲ್ತಾನಿಮಟ್ಟಿಗೆ ಸ್ವಲ್ಪ ಎಳನೀರು ಮಿಕ್ಸ್ ಮಾಡಿ ಹಚ್ಚಿ, 2-3 ತಾಸು ಬಿಟ್ಟು ನಂತರ ಮುಖ ತೊಳೆಯುವುದರಿಂದ ಸೂರ್ಯನ ಪ್ರಖರತೆಯಿಂದ ಕಪ್ಪಾಗಿರೋ ಚರ್ಮದ ಬಣ್ಣ ಕೂಡ ಸಹಜ ಬಣ್ಣಕ್ಕೆ ತಿರುಗುತ್ತದೆ. ದೇಹದಲ್ಲಿನ ಕೈ ಕಾಲು ಊತ ಕಡಿಮೆ ಮಾಡುವಲ್ಲಿ ಎಳನೀರು ಸಹಕಾರಿಯಾಗಿದೆ. ಸ್ನಾನದ ನೀರಿನಲ್ಲಿ ಎಳನೀರು ಸೇರಿಸಿ ಸ್ನಾನ ಮಾಡಿದರೇ ಚರ್ಮ ರೋಗ ಉಂಟಾಗುವುದನ್ನು ತಪ್ಪಿಸಬಹುದು.

ಒಣ ಅಥವಾ ಸಿಕ್ಕು ಕೂದಲಿಗೆ ಎಳನೀರು ತೇವಾಂಶ ತುಂಬುವುದರ ಜೊತೆಗೆ ಕಂಡೀಶನರ್ ರೀತಿ ಕೂದಲು ರೇಷ್ಮೆಯಂತಾಗಲು ಸಹಕರಿಸುತ್ತದೆ.

ಬೇಸಿಗೆಯ ಬಿಸಿಲಲ್ಲಿ ಬಳಲಿ ಸುಸ್ತಾಗುವವರು, ದುಬಾರಿ ವೆಚ್ಚದ ರಸಾಯನಿಕ ಮಿಶ್ರಿತ ತಂಪು ಪಾನೀಯ ಕುಡಿಯುವ ಬದಲಿಗೆ, ಕಡಿಮೆ ವೆಚ್ಚದ ಎಳನೀರನ್ನು ನಿಯಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ದಿನಂಪ್ರತಿ ಎಳನೀರು ಸೇವನೆ ಮಾಡಿ, ಸರ್ವ ರೋಗಗಳಿಗೂ ವಿದಾಯ ಹೇಳಿ…..

 

ಲೇಖನ -ಶ್ವೇತಾ, ಜಿ

ಸಂಪರ್ಕ : 7483377648

ಫೋಟೋ : -ಬೋರೇಶ್ ಎಂ.ಜೆ.