ಚಿತ್ರದುರ್ಗ: ಇದುವರೆಗೂ ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಸೋಂಕಿನ ಒಟ್ಟು 06 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಅಧಿಕಾರಿಗಳು ಸಿದ್ಧರಿರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಆಗಿರುವ ಬಿಡಿಎ ಆಯುಕ್ತ ಡಾ. ಪ್ರಕಾಶ್ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸೋಂಕಿನ ಸ್ಥಿತಿಗತಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಸಿರು ವಲಯದಲ್ಲಿ ಗುರುತಿಸಿಕೊಂಡು, ದಿಢೀರನೆ ಕಿತ್ತಳೆ ವಲಯಕ್ಕೆ ಬದಲಾಗಿರುವ ಜಿಲ್ಲೆಗಳ ಬಗ್ಗೆ ದೇಶದ ಪ್ರಧಾನಮಂತ್ರಿಗಳೇ ಖುದ್ದಾಗಿ ಗಮನ ಹರಿಸಿ, ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ಆಗಮಿಸಿದ 15 ತಬ್ಲೀಘ್‍ಗಳ ಪೈಕಿ ಒಟ್ಟು 06 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.  ಮೂವರಿಗೆ ಮೇ. 08 ಹಾಗೂ ಮತ್ತೆ ಮೂವರಿಗೆ ಮೇ. 09 ರಂದು ಬಂದ ವರದಿಯಲ್ಲಿ ಸೋಂಕು ಇರುವುದು ಖಚಿತಗೊಂಡಿದ್ದು, ಇವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆ ಬಳಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ.  ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 06 ಪ್ರಕರಣಗಳು ಸಕ್ರಿಯವಾಗಿವೆ.  ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಿಂದ ಅನುಮತಿಯೊಂದಿಗೆ ಪ್ರವೇಶಿಸುವ ಜನರೊಂದಿಗೆ ಚೆಕ್‍ಪೋಸ್ಟ್‍ನಲ್ಲಿನ ಅಧಿಕಾರಿ, ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ವಿಧಾನಗಳೊಂದಿಗೆ ವ್ಯವಹರಿಸಬೇಕು.  ನಿರ್ಲಕ್ಷ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಯಾರಿಗೂ ಸೋಂಕು ಹರಡಬಾರದು.  ಹೀಗಾಗಿ ಎಲ್ಲರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದರೂ ಸಹ, ಸಮರ್ಥವಾಗಿ ನಿಭಾಯಿಸಲು ಎಲ್ಲ ತಾಲ್ಲೂಕು ಮಟ್ಟದಲ್ಲಿ ತಹಸಿಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು ಸಕಲ ರೀತಿಯಲ್ಲಿ ಸಿದ್ಧವಾಗಿರಬೇಕು.  ಅಲ್ಲದೆ ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವತ್ತಲೂ ಪ್ರಾಮುಖ್ಯತೆ ನೀಡಬೇಕು.  ಲಭ್ಯವಿರುವ ಎಲ್ಲ ಸಮುದಾಯ ಭವನಗಳು, ಹಾಸ್ಟೆಲ್‍ಗಳು, ಖಾಸಗಿ ಆಸ್ಪತ್ರೆಗಳು, ಕಲ್ಯಾಣಮಂಟಪ ಹೀಗೆ ಸೂಕ್ತ ಸೌಲಭ್ಯಗಳೊಂದಿಗೆ ಎಲ್ಲವೂ ಸಕಾಲದಲ್ಲಿ ಸುಸಜ್ಜಿತವಾಗಿ ಲಭ್ಯವಾಗಿರುವಂತೆ ನೋಡಿಕೊಳ್ಳಬೇಕು.  ತಾಲ್ಲೂಕು ವಾರು ಕ್ರಿಯಾ ಯೋಜನೆ ಲಭ್ಯವಿರಬೇಕು.  ಕೆಲವು ಕಡೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ವಿವಿಧೆಡೆಗಳಿಂದ ಆಕ್ಷೇಪಣೆ ಹಾಗೂ ಪ್ರಭಾವ, ಒತ್ತಡ ಬರುವುದು ಸಹಜ.  ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು, ಸಹಕಾರ ನೀಡುವ ಮೂಲಕ ಕೋವಿಡ್ ಪ್ರಕರಣ ನಿರ್ವಹಿಸಲು ಬೆಂಬಲಿಸಬೇಕು.  ಅಧಿಕಾರಿಗಳು ಇಂತಹ ಒತ್ತಡಗಳಿಗೆ ಒಳಗಾಗದೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು.  ಸರ್ಕಾರದ ಮಟ್ಟದಲ್ಲಿ ಯಾವುದೇ ನೆರವು ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಅತ್ಯಾವಶ್ಯಕ ತುರ್ತು ಸೇವೆಗಳಿಗಷ್ಟೇ ಪ್ರಾಧಾನ್ಯತೆ ನೀಡಿ.  ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು.  ನೆರೆಹೊರೆಯ ಜಿಲ್ಲೆಗಳಿಂದ ಓಡಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ,  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಕುಮಾರಸ್ವಾಮಿ, ಡಾ. ರಂಗನಾಥ್ ಸೇರಿದಂತೆ ತಾಲ್ಲೂಕುಗಳ ವೈದ್ಯಾಧಿಕಾರಿಗಳು, ತಹಸಿಲ್ದಾರರು ಭಾಗವಹಿಸಿದ್ದರು.