ಚಿತ್ರದುರ್ಗ: ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ಸಮಾರಂಭ ಅ.೫ ರಂದು ಬೆಂಗಳೂರಿನ ವಿಧಾನಸೌಧದ ಪಶ್ಚಿಮ ದ್ವಾರದ ವಾಲ್ಮೀಕಿ ತಪೋವನದಲ್ಲಿ ವೈಭವೋಪೇತವಾಗಿ ನಡೆಯಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುತ್ಥಳಿ ಲೋಲಾರ್ಪಣೆ ಮಾಡುವರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಮಹಾಸ್ವಾಮಿ ಸಾನಿಧ್ಯ ವಹಿಸುವರು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ವಾಲ್ಮೀಕಿ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು ೩೫ ರಿಂದ ೪೦ ಲಕ್ಷ ರೂ.ವೆಚ್ಚದಲ್ಲಿ ಸಿದ್ದವಾಗಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿ ನಾಯಕ ಜನಾಂಗದ ಸ್ವಾಭಿಮಾನದ ಸಂಕೇತವಾಗಿರುವುದರಿಂದ ಅಂದಿನ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಯಕ ಸಮಾಜದವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಸಮಾಜದವರೆ ಪುತ್ಥಳಿ ವೆಚ್ಚ ಭರಿಸಿದ್ದು, ತಪೋವನದ ಅಭಿವೃದ್ದಿಗೆ ರಾಜ್ಯ ಸರ್ಕಾರ ಒಂದು ಕೋಟಿ ರೂ.ಅನುದಾನ ನೀಡಿದೆ. ಇದೊಂದು ಐತಿಹಾಸಿಕ ಸಮ್ಮೇಳನವಾಗಿದ್ದು, ರಾಜಕೀಯವಾಗಿ ಸಿಗಬೇಕಾದ ಸವಲತ್ತು, ಮೀಸಲಾತಿ, ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿರವರ ಹೆಸರನ್ನು ನಾಮಕರಣ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಪುತ್ಥಳಿ ಲೋಕಾರ್ಪಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಮಂಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಯೋಗೇಶ್‌ಬಾಬು ಮಾತನಾಡುತ್ತ ವಿಧಾನಸೌಧದ ಮುಂಭಾಗ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿರುವುದರಿಂದ ರಾಜ್ಯದ ಮೂಲೆ ಮೂಲೆಗಳಿಂದ ನಾಯಕ ಸಮಾಜದವರು ಭಾಗವಹಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡಬೇಕಿದೆ. ಶೇ.ಏಳುವರೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಕುರಿತು ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ಆದ್ದರಿಂದ ನಾಯಕ ಸಮಾಜದ ಅಭಿವೃದ್ದಿ ಮುಖ್ಯವೇ ಹೊರತು ಅಧಿಕಾರವಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ವರ್ಗಗಳ ವಿಭಾಗದ ಅಧ್ಯಕ್ಷ ಹೆಚ್.ಅಂಜನಪ್ಪ ಮಾತನಾಡಿ ವಾಲ್ಮೀಕಿ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ನಾಯಕ ಸಮಾಜ ಬಲ ತೋರಿಸಬೇಕಿದೆ. ಶೇ.ಏಳುವರೆ ಮೀಸಲಾತಿಗಾಗಿ ಹೋರಾಟ ನಡೆಸಿದ ಫಲವಾಗಿ ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದ್ದು, ಅಲ್ಲಿಂದ ರಾಜ್ಯ ಸರ್ಕಾರಕ್ಕೆ ಬಂದು ಮುಖ್ಯಕಾರ್ಯದರ್ಶಿಯವರ ಬಳಿ ಇದೆ. ಇಂತಹ ವಿಚಾರದಲ್ಲಿ ರಾಜಕೀಯ ಬಿಟ್ಟು ನಾಯಕ ಸಮಾಜ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಹೆಚ್.ಎಂ.ಎಸ್.ನಾಯಕ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮಧುಪಾಲೇಗೌಡ, ಜೆ.ಡಿ.ಎಸ್.ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ದಿನೇಶ್‌ಗೌಡಗೆರೆ, ಹೆಚ್.ರಾಜಣ್ಣ ಲಕ್ಷ್ಮಿಸಾಗರ, ಯುವ ವಕೀಲ ಅಶೋಕ್‌ಬೆಳಗಟ್ಟ, ಜೆ.ಡಿ.ಎಸ್.ಉಪಾಧ್ಯಕ್ಷ ಗುರುಸಿದ್ದಪ್ಪ ಸೇರಿದಂತೆ ನಾಯಕ ಸಮಾಜದ ಮುಖಂಡರು ಸಭೆಯಲ್ಲಿ ಹಾಜರಿದ್ದರು.