ಚಿತ್ರದುರ್ಗ: ಇದೇ 31ರಂದು ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ಸಹಯೋಗದೊಂದಿಗೆ ಸುಸಜ್ಜಿತವಾದ ಕ್ಯಾತ್‌ಲ್ಯಾಬ್ ಸೌಲಭ್ಯವುಳ್ಳ ಇಂಡಿಯಾನಾ ಎಸ್.ಜೆ.ಎಂ. ಹಾರ್ಟ್ ಸೆಂಟರ್‌ನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಗಳು, ಇದೀಗ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ಹಾರ್ಟ್ ಸೆಂಟರ್‌ನ ೨೪x೭ ಹೃದಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ತಜ್ಞ ವೈದ್ಯರ ತಂಡವು ಕಾರ್ಯನಿರ್ವಹಿಸಲಿದೆ. ಇಕ್ಹೊ, ಕಾರ್ಡಿಯಾಗ್ರಫಿ, ಇಸಿಜಿ, ಟಿಎಂಟಿ, ಅತ್ಯಾಧುನಿಕ ಲ್ಯಾಬ್ ಸೌಲಭ್ಯ, ಇನ್ನಿತರೆ ಹೃದಯ ಸಂಬಂಧಿ ಪರೀಕ್ಷೆಗಳು ಹಾಗು ಅಂಜಿಯೋಗ್ರಾಮ್ ಮತ್ತು ಅಂಜಿಯೋಪ್ಲಾಸ್ಟಿಗಳನ್ನು ಮಾಡಲಾಗುತ್ತದೆ ಎಂದರು.

ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಕಾರ್ಯನಿರ್ವಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಸದಸ್ಯೆ ಶ್ರೀಮತಿ ಗಾಯತ್ರಿ ಶಿವರಾಂ, ಬಸವೇಶ್ವರ ಆಸ್ಪತ್ರೆಯ ಡೀನ್ ಡಾ|| ಜಿ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ|| ಎಲ್. ಪಾಲಾಕ್ಷಯ್ಯ ಮುಂತಾದವರಿದ್ದರು.

ಡಾ|| ಯೂಸುಫ್ ಕುಂಬ್ಳೆಯವರ ಮಾಲಿಕತ್ವದ ಇಂಡಿಯಾನಾ ಆಸ್ಪತ್ರೆಯು ಮಂಗಳೂರಿನಲ್ಲಿ ಸುಮಾರು ೩೭೫ ಬೆಡ್‌ಗಳ ಆಧುನಿಕ ಕ್ಯಾತ್‌ಲ್ಯಾಬ್ ಹೊಂದಿದೆ. ನುರಿತ ವೈದ್ಯರ ತಂಡವು ತಿಂಗಳಿಗೆ ೫೦ಕ್ಕು ಹೆಚ್ಚು ಹೃದಯಸಂಬಂಧಿ ಶಸ್ತ್ರಚಿಕಿತ್ಸೆ ಮತ್ತು ಅಂಜಿಯೋಪ್ಲಾಸ್ಟಿಗಳನ್ನು ಮಾಡುತ್ತಾರೆ. ಈಗಾಗಲೇ ಹಾಸನ ಮತ್ತು ಕಾಸರಗೊಡಿನಲ್ಲಿ ಇಂಡಿಯಾನಾ ಆಸ್ಪತ್ರೆಯ ಶಾಖೆಗಳಿದ್ದು ಈಗ ನಮ್ಮ ಆಸ್ಪತ್ರೆಯಲ್ಲಿ ಆರಂಭಿಸುತ್ತಿರುವುದು ಈ ಭಾಗದ ಜನತೆಗೆ ಹೆಚ್ಚು ಪ್ರಯೋಜನವಾಗಲಿದೆ.

ಈ ಸೌಲಭ್ಯಗಳನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಬಸವೇಶ್ವರ ಆಸ್ಪತ್ರೆ ಮತ್ತು ಇಂಡಿಯಾನಾ ಎಸ್.ಜೆ.ಎಂ. ಹಾರ್ಟ್ ಸೆಂಟರ್‌ನ ಆಡಳಿತ ಮಂಡಳಿ ಕೋರಿದೆ.