ಚಿತ್ರದುರ್ಗ : ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಏ. 04 ರ ಹೆಲ್ತ್ ಬುಲೆಟಿನ್ ಅನ್ವಯ, ಸದ್ಯ 29 ಜನರ ಮೇಲೆ ಆರೋಗ್ಯ ಇಲಾಖೆ ಆಯಾ ವ್ಯಕ್ತಿಗಳ ಮನೆಯಲ್ಲಿಯೇ ಪ್ರತ್ಯೇಕಿಸಿ (ಹೋಂ ಕ್ವಾರಂಟೈನ್) ನಿಗಾ ವಹಿಸಲಾಗಿದೆ.  122 ಶಂಕಿತರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು ಈ ಪೈಕಿ ಈವರೆಗೆ 107 ಜನರ ವರದಿ ನೆಗಟೀವ್ ಎಂದು  ವರದಿಯಾಗಿದೆ.  ಇಬ್ಬರ ಪರೀಕ್ಷಾ ವರದಿ ಬರುವುದು ಬಾಕಿ ಇದೆ.

ಏರ್‍ಪೋರ್ಟ್ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ 117 ಜನರ ಬಗ್ಗೆ ಮಾಹಿತಿ ಪಡೆಯಲಾಗಿತ್ತು.  ಜಿಲ್ಲೆಯಲ್ಲಿ ರ್ಯಾಪಿಡ್ ರೆಸ್ಕ್ಯೂ ತಂಡದವರು ವಿದೇಶದಿಂದ ಬಂದಂತಹ ಅಥವಾ ಸಂಪರ್ಕ ಇರುವಂತಹ ಒಟ್ಟು 140 ಜನರನ್ನು ಗುರುತಿಸಿದ್ದು, ನಿಗಾದಲ್ಲಿ ಇರಿಸಲಾಗಿದೆ. ಇದುವರೆಗೂ 21 ಜನರನ್ನು ಬೇರೆ ಜಿಲ್ಲೆಗಳಿಗೆ ಶಿಫಾರಸು ಮಾಡಲಾಗಿದೆ.  ಜಿಲ್ಲೆಯಲ್ಲಿ ಈವರೆಗೆ 259 ಜನರನ್ನು ನಿಗಾ ವಹಿಸುವುದಕ್ಕಾಗಿ ಗುರುತಿಸಲಾಗಿತ್ತು.  ಶಂಕಾಸ್ಪದ ಪ್ರಕರಣವೆಂದು ಪರಿಗಣಿಸಿದ್ದವರ ಪೈಕಿ 207 ಜನರು ಈಗಾಗಲೆ 14 ದಿನಗಳ ಹಾಗೂ 64 ಜನರು 28 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ.  ಇದುವರೆಗೂ 122 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.  107 ಜನರ ಪರೀಕ್ಷಾ ವರದಿ ನೆಗಟೀವ್ ಎಂದು ಬಂದಿದೆ. 02 ಜನರ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ.  ಶನಿವಾರದಂದು ಒಬ್ಬರು ಶಂಕಿತರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, 379 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 2719 ಜನರಿಗೆ ಸಾಮಾನ್ಯ ಜ್ವರ ತಪಾಸಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಲಾಕ್‍ಡೌನ್ ಘೋಷಿಸಲಾಗಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬಾರದು.  ಅಗತ್ಯ ಸಾಮಗ್ರಿ ಬೇಕಿದ್ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸಾಮಗ್ರಿ ಖರೀದಿಸಿ, ಕೂಡಲೆ ಮನೆಗಳಿಗೆ ಹಿಂದಿರುಗಬೇಕು.  ಹಿರಿಯ ನಾಗರಿಕರು, ಮಕ್ಕಳು ಮನೆಯಿಂದ ಹೊರಗಡೆ ಹೋಗಬಾರದು.  ವ್ಯಕ್ತಿಗಳಿಂದ ಕನಿಷ್ಟ 2 ಮೀ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.  ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಅಡ್ಡ ಹಿಡಿದುಕೊಳ್ಳಬೇಕು.  ಮೂಗು, ಬಾಯಿ ಅಥವಾ ಕಣ್ಣಿಗೆ ಪದೇ ಪದೇ ಕೈಯಿಂದ ಸ್ಪರ್ಶ ಮಾಡಿಕೊಳ್ಳಬಾರದು.  ಕೊರೋನಾ ವೈರಸ್ ಸೋಂಕು ಪೀಡಿತ ದೇಶ ಅಥವಾ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಆಗಮಿಸಿದರೂ, ಈ ಕುರಿತ ಮಾಹಿತಿಯನ್ನು 104 ಅಥವಾ 08194-1077 ಸಂಖ್ಯೆಗೆ ಅಥವಾ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.