ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಹೆಸರು ಪಡೆದಿದೆ. ಆದರೆ 2019 ರ ಜನವರಿಯಿಂದ ಡಿಸೆಂಬರ್ 6 ರ ವರೆಗೆ ದಾಖಲಾದ ಮಳೆ ವಿವರದನ್ವಯ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 529 ಮಿ. ಮೀ ಇದ್ದು, 2019 ರ ಜನವರಿಯಿಂದ ಡಿಸೆಂಬರ್ 6 ರ ವರೆಗೆ ವಾಸ್ತವಿಕವಾಗಿ ಸರಾಸರಿ 778 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ 249 ಮಿ.ಮೀ ಅಧಿಕ ಮಳೆ ಸುರಿದಿದೆ. ಕಳೆದ 6 ವರ್ಷಗಳಲ್ಲಿ ವರದಿಯಾದ ಮಳೆ ಪ್ರಮಾಣ ಇಂತಿದೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕುವಾರು ದಾಖಲಿಸಿದ ಮಳೆಯ ಪ್ರಮಾಣ ಇಂತಿದೆ.  ಹೊಸದುರ್ಗ ತಾಲ್ಲೂಕಿನಲ್ಲಿ 582ಮಿ. ಮೀ ವಾಡಿಕೆ ಮಳೆಗೆ 1010 ಮಿ.ಮೀ ನಷ್ಟು ಮಳೆಯಾಗಿದ್ದು ಶೇ. 74 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ತಾಲ್ಲೂಕುವಾರು ಅತಿ ಹೆಚ್ಚು ಮಳೆ ಪಡೆದ ಸ್ಥಾನ ಹೊಸದುರ್ಗ ತಾಲ್ಲೂಕಿನದು. ನಂತರ ಹೊಳಲ್ಕೆರೆ 620 ಮಿ.ಮೀ ವಾಡಿಕೆ ಮಳೆಯಿದ್ದು, 925 ಮಿ.ಮೀ ನಷ್ಟು ಮಳೆಯಾಗಿದೆ. ಹಿರಿಯೂರು 522 ಮಿ.ಮೀ ವಾಡಿಕೆ ಮಳೆಯಿದ್ದು, 789 ರಷು ಮಳೆಯಾಗಿದೆ. ಚಳ್ಳಕೆರೆ ವಾಡಿಕೆ ಮಳೆ 405 ಮಿ.ಮೀ ಇದ್ದು, 585 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗದಲ್ಲಿ 600 ಮಿ.ಮೀ ವಾಡಿಕೆ ಮಳೆಯಿದ್ದು, 795ಮಿ.ಮೀ ರಷ್ಟು ಮಳೆ ವರದಿಯಾಗಿದೆ. ಮೊಳಕಾಲ್ಲೂರು ತಾಲ್ಲೂಕಿನಲ್ಲಿ 532 ಮಿ.ಮೀ ವಾಡಿಕೆ ಮಳೆಯಿದ್ದು, 580ಮಿ.ಮೀ ವಾರ್ಷಿಕ ಮಳೆಯಾಗಿ ಶೇ. 09 ರಷ್ಟು ಹೆಚ್ಚು ಮಳೆಯಾಗಿದೆ.

ಕಳೆದ ಐದು ವರ್ಷಗಳ ಹಿಂದಿನ ಮಳೆ ಅಂಕಿ ಅಂಶಗಳನ್ವಯ 2014 ರಲ್ಲಿ 537 ಮಿ.ಮೀ ವಾಡಿಕೆಗೆ 757 ರಷ್ಟು ಮಳೆಯಾಗಿದೆ. 2015 ರಲ್ಲಿ 539 ವಾಡಿಕೆ ಮಳೆ, 706 ಮಿ.ಮೀ ರಷ್ಟು ಮಳೆಯಾಗಿದೆ. 2016 ರಲ್ಲಿ 535 ಮಿ.ಮೀ ವಾಡಿಕೆ ಮಳೆಯಿದ್ದು, 322 ರಷ್ಟು ಮಳೆಯಾಗಿದ್ದು ಇದು ಐದು ವರ್ಷಗಳಲ್ಲಿ ಅತೀ ಕಡಿಮೆ ಮಳೆಯಾದ ವರ್ಷವಾಗಿದೆ.  2017 ರಲ್ಲಿ 535 ವಾಡಿಕೆಗೆ 637 ರಷ್ಟು, 2018 ರ ಸಾಲಿನಲ್ಲಿ 535 ವಾಡಿಕೆ ಮಳೆ ನಿಗದಿಯಾಗಿದ್ದು, 541.8 ಮಿ. ಮೀ ರಷ್ಟು ವಾರ್ಷಿಕ ಮಳೆಯಾಗಿದೆ. 2019 ರ ಜನವರಿಯಿಂದ ಡಿಸೆಂಬರ್‍ವರೆಗೂ 529 ಮಿ. ಮೀ ವಾಡಿಕೆ ಮಳೆ ಗುರುತಿಸಿದ್ದು, 778.8 ರಷ್ಟು ಮಳೆ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ 249 ಮಿ.ಮೀ ನಷ್ಟು ಅಧಿಕ ಮಳೆ ದಾಖಲಾಗಿದ್ದು, ಕಳೆದ 6 ವರ್ಷಗಳಿಗಿಂತ ಅಧಿಕ ಮಳೆ 2019 ರಲ್ಲಿ ಸುರಿದಿದ್ದು ಇದು ಜಿಲ್ಲೆಯ ಅಂತರ್ಜಲ ಮಟ್ಟ ಹೆಚ್ಚಿಸಿರುವುದಲ್ಲದೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಬರಪೀಡಿತ ಜಿಲ್ಲೆ ಚಿತ್ರದುರ್ಗದಲ್ಲಿ ಉತ್ತಮ ಮಳೆಯಾಗಿ, ಕೆರೆ-ಕಟ್ಟೆಗಳು ತುಂಬಿ, ರೈತರು ನೆಮ್ಮದಿಯಿಂದ ಬದುಕುವಂತಾಗಿದೆ.