ಚಿತ್ರದುರ್ಗ: ಪತ್ರಿಕಾರಂಗಕ್ಕೆ ಅದರದೆ ಆದ ಪ್ರಾಮುಖ್ಯತೆಯಿದೆ. ಕಳೆದ 30-4೦ ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಸಂಪಾದಕೀಯ ಪ್ರಕಟವಾದರೆ ಕೆಲವು ಸಚಿವರು ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದಿರುವ ಉದಾಹರಣಗಳಿವೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘ ಚಿತ್ರದುರ್ಗ ಶಾಖೆ, ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪತ್ರಿಕಾದಿನಾಚರಣೆಯನ್ನು ಪತ್ರಕರ್ತರ ಭವನದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳ ಸಂಪಾದಕರು ವರದಿಗಾರರಿಗೆ ಸಾಕಷ್ಟು ಸಮಸ್ಯೆಗಳಿವೆ. ಅನೇಕ ವರ್ಷಗಳ ಹಿಂದೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಜಾಸ್ತಿಯಾಗಿತ್ತು. ಈಗ ಪತ್ರಿಕೆಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಪತ್ರಿಕೆಗಳನ್ನು ನಡೆಸುವುದು ದುಬಾರಿಯಾಗಿರುವುದರಿಂದ ಎಷ್ಟೋ ಪತ್ರಿಕೆಗಳು ನಿಂತಿವೆ. ಸುದ್ದಿಸಂಗ್ರಹ ಮಾಡಿ ಪತ್ರಿಕೆಯನ್ನು ಮುದ್ರಿಸಿ ಬೆಳಿಗ್ಗೆ ಹಂಚಿಕೆ ಮಾಡುವುದರಿಂದ ಹಿಡಿದು ನಾನಾ ರೀತಿಯ ಕಷ್ಟಗಳನ್ನು ಪತ್ರಿಕೆಯ ಮಾಲೀಕರು ಎದುರಿಸಬೇಕಾಗಿದೆ. ನಲವತ್ತು ಐವತ್ತು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದರೆ ಆಳುವ ಸರ್ಕಾರಗಳು ಅಧಿಕಾರದಿಂದ ಕೆಳಗಿಳಿಯುವಷ್ಟು ಪ್ರಭಾವಶಾಲಿಯಾಗಿರುತ್ತಿದ್ದವು ಎಂದು ಲಂಕೇಶ್ ಪತ್ರಿಕೆಯನ್ನು ನೆನಪಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ನಿಷ್ಟುರವಾಗಿ ಸುದ್ದಿಗಳನ್ನು ಬರೆಯುವ ಸಂಪಾದಕರುಗಳ ಕೊಲೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ  ಎಂದರು.

ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ನಾಗತಿಹಳ್ಳಿ ನಾಗರಾಜ್, ವಾರ್ತಾಧಿಕಾರಿ ಬಿ.ಧನಂಜಯಪ್ಪ, ಅಧ್ಯಕ್ಷ ಎಸ್.ಶ್ರೀನಿವಾಸ್, ಕೋಶಾಧ್ಯಕ್ಷ ಗೊಂಡಬಾಳ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಸಂಪಿಗೆ ಟಿ.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಪತ್ರಕರ್ತ ಮಾಲತೇಶ್‌ಅರಸ್ ನಿರೂಪಿಸಿದರು.