ಚಿತ್ರದುರ್ಗ: ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕರು, ಕರ್ನಾಟಕ ರಾಜ್ಯ ಮಹರ್ಷಿ ಶ್ರೀ ವಾಲ್ಮೀಕಿ ಪ್ರಶಸ್ತಿ ಪುರಸ್ಕøತ ದಿ.ಡಿ.ಬೋರಪ್ಪರವರ ನುಡಿ ನಮನ ಕಾರ್ಯಕ್ರಮ ಮಾ.16 ರಂದು ಬೆಳಿಗ್ಗೆ 10 ಗಂಟೆಗೆ ಮಹಾರಾಣಿ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಸಂದೀಪ್ ತಿಳಿಸಿದರು.

ನಗರದ ಮಹರಾಣಿ ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ತಾಲ್ಲೂಕಿನ ದೊಡ್ಡಾಲಘಟ್ಟ ಗ್ರಾಮದ ಬಡ ಕುಟುಂಬದಲ್ಲಿ 1935 ರಲ್ಲಿ ಡಿ.ಬೋರಪ್ಪ ಅವರು ಜನಿಸಿದರು. ತಂದೆ ಕೋಟೆ ಸಣ್ಣ ಬೋರಪ್ಪ ಮತ್ತು ತಾಯಿ ಬೋರಮ್ಮ. ಆರಂಭದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿಯೇ ಪಡೆದ ಇವರು, ದಾವಣಗೆರೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಬಿಎಸ್‍ಸಿ, ಬಿಇಡಿ ಪದವಿ ಪಡೆದರು. ನಂತರ ಕಾನೂನಿನ ಅಧ್ಯಯನಕ್ಕಾಗಿ ಬಿ.ಎಲ್. ಕೋರ್ಸ್, ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಮುಗಿಸಿದರು. ಆ ದಿನಮಾನಗಳಲ್ಲಿ ತ್ರಿಭಾಷಾ ಸೂತ್ರ ರಾಷ್ಟ್ರ ವ್ಯಾಪಿಯಾಗಿತ್ತು. ಇದನ್ನು ಮನಗಂಡ ಬೋರಪ್ಪನವರು ಹಿಂದಿ ‘ರಾಷ್ಟ್ರಭಾಷಾ ವಿಶಾರದ’ ಇತ್ಯಾದಿ ಭಾಷಾ ಪರೀಕ್ಷೆಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಈ ಎಲ್ಲಾ ಶೈಕ್ಷಣಿಕ ಅರ್ಹತೆಗಳನ್ನು ಗಳಿಸಿದ ಬೋರಪ್ಪನವರು ಆರಂಭದಲ್ಲಿ ಖಾಸಗಿ ಪ್ರೌಢಶಾಲೆಯೊಂದರಲ್ಲಿ ಮುಖ್ಯಶಿಕ್ಷಕರಾಗಿ ಕೆಲಸ ಮಾಡಿದರು. ಬೇರೊಬ್ಬರಲ್ಲಿ ಕೆಲಸ ಮಾಡುವ ಬದಲು ತಾವೇ ಉದ್ಯೋಗದಾತರಾಗಬೇಂಬ ಸಂಕಲ್ಪ ಮಾಡಿದರು. ಅದರಂತೆ ಈಗಿನ ಓಲ್ಡ್ ಮಿಡಲ್ ಸ್ಕೂಲ್ ಹಿಂಭಾಗದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು 1968 ರಲ್ಲಿ ಶಾಲೆಯೊಂದನ್ನು ತೆರೆದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ, ಉತ್ತಮ ಶಾಲೆಯ ಅಗತ್ಯತೆ ಮನಗಂಡ ಬೋರಪ್ಪನವರು ಕೋಟೆಯ ಮುಂಭಾಗದ ಬರಡಾದ ಜಾಗವನ್ನು ಖರೀದಿಸಿ, ಅಲ್ಲಿ ಸುವ್ಯವಸ್ಥಿತವಾದ ಶೈಕ್ಷಣಿಕ ಆಲಯ ಕಟ್ಟಿದರು. ಅದೇ ಇಂದಿನ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ.

ಈ ವಿದ್ಯಾಸಂಸ್ಥೆ ಅಡಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣ ಎಂ.ಎ. ಜೊತೆಗೆ ಪ್ಯಾರಮೆಡಿಕಲ್ ಕೋರ್ಸುಗಳು ನಡೆದು ಬರುತ್ತಿವೆ. ಜಿಲ್ಲೆಯಾದ್ಯಂತ 35 ಶಾಲಾ ಕಾಲೇಜುಗಳು ನಡೆಯುತ್ತಿವೆ. ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ಒಟ್ಟು 700 ಜನ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತ ಮನೋಭಾವದ ಕೊಡುಗೈ ದಾನಿಯಾದ ಹೃದಯವಂತ, ಸಹೃದಯಿ ಬೋರಪ್ಪನವರು ಬಡವರ ಪಾಲಿನ ಬಂದು. ಇವರು 2018 ಮಾರ್ಚ್ 3 ರಂದು ನಿಧನರಾದರು. ಅವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾ 16 ರಂದು ನಡೆಯಲಿರುವ ನುಡಿ ನಮನ ಕಾರ್ಯಕ್ರಮದ ಸಾನಿಧ್ಯವನ್ನು ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ ವಹಿಸುವರು. ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್ ‘ಬೋರಪ್ಪಾಜಿಯವರ ಬಹುಮುಖ ವ್ಯಕ್ತಿತ್ವ’. ಡಾ.ಎಸ್.ಎಂ.ಮುತ್ತಯ್ಯ ‘ಶೈಕ್ಷಣಿಕ ರಂಗಕ್ಕೆ ಬೋರಪ್ಪಾಜಿಯವರ ಕೊಡುಗೆ’. ಡಾ.ಹೆಚ್.ಗುಡ್ಡದೇಶ್ವರಪ್ಪ ‘ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನಕ್ಕೆ ಬೋರಪ್ಪಾಜಿಯವರ ಕೊಡುಗೆ’. ಡಾ.ವಿರುಪಾಕ್ಷಿ ಪೂಜಾರಹಳ್ಳಿ ‘ಸಂಸ್ಥಾಪಕರ ಕನಸು ಮತ್ತು ಕಾಣಿಕೆ’ ಹಾಗೂ ಡಾ.ಜೆ.ಕರಿಯಪ್ಪ ಮಾಳಿಗೆ ‘ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಮೌಲ್ಯವರ್ಧನೆಯಲ್ಲಿ ಸಂಸ್ಥಾಪಕರ ಪಾತ್ರ’ ವಿಷಯ ಕುರಿತು ಮಾತನಾಡುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.