ಚಿತ್ರದುರ್ಗ : ಸುಭದ್ರ ಸರ್ಕಾರ ರಚನೆ ಮಾಡುವುದರಲ್ಲಿ, ಏ. 18 ರಂದು ಎಲ್ಲ ಕಾರ್ಮಿಕರು ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಕರೆ ನೀಡಿದರು.

  ಚಿತ್ರದುರ್ಗದ ಎಪಿಎಂಸಿ ಆವರಣದಲ್ಲಿನ ದಲಾಲರ ಭವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಾರ್ಮಿಕರಿಗಾಗಿ ಏರ್ಪಡಿಸಲಾದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ದೇಶದ ಆರ್ಥಿಕತೆ ಪ್ರಗತಿ ಸಾಧಿಸುವಲ್ಲಿ ಕಾರ್ಮಿಕರ ಶ್ರಮ ಹಾಗೂ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನಮ್ಮ ಸಂವಿಧಾನ ಕಲ್ಪಿಸಿದ್ದು, ಪ್ರಜಾಪ್ರಭುತ್ವ ಬಲಪಡಿಸಲು ಈ ಹಕ್ಕನ್ನು ಎಲ್ಲರೂ ಸಮರ್ಪಕವಾಗಿ ತಪ್ಪದೆ ಬಳಕೆ ಮಾಡುವುದು ಅಗತ್ಯವಾಗಿದೆ.  ಅಸಂಘಟಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿದ್ದು, ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಾವು ಕೊಡುಗೆ ನೀಡಬೇಕಿದೆ.  ಯಾರೂ ಕೂಡ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತಪ್ಪದೆ ಮತ ಚಲಾಯಿಸಿ ಎಂದು ಜಿಲ್ಲಾ ಪಂಚಾಯತ್ ಸಿಇಒ ಸಿ. ಸತ್ಯಭಾಮ ಅವರು ಹೇಳಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜು, ಕಾರ್ಮಿಕ ನಿರೀಕ್ಷಕ ರಾಜಣ್ಣ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಷೀರ್ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ನೈತಿಕ ಮತದಾನ ಕುರಿತು ಎಲ್ಲ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.  ಸಮಾರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ಹಮಾಲರು, ದಲಾಲರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.