ಚಿತ್ರದುರ್ಗ: ಹೊರಗಿನಿಂದ ಬಂದಿರುವ ಅಭ್ಯರ್ಥಿಗಳಿಗೆ ಮತ ಹಾಕಿ ಒಪ್ಪತ್ತಿನ ಕೂಳಿಗಾಗಿ ಶಾಶ್ವತವಾದ ಕೂಳು ಕಳೆದುಕೊಳ್ಳಬೇಡಿ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಮತದಾರರಲ್ಲಿ ಮನವಿ ಮಾಡಿದರು.
ಕಬೀರಾನಂದಸ್ವಾಮಿ ಮಠದ ಸಮೀಪವಿರುವ ಅಗಳು ಏರಿಯಾದಲ್ಲಿ ಶುಕ್ರವಾರ ನೂರಾರು ಯುವಕರನ್ನು ಬಿಜೆಪಿ.ಗೆ ಬರಮಾಡಿಕೊಂಡು ಮಾತನಾಡಿದ ಜಿ.ಹೆಚ್.ತಿಪ್ಪಾರೆಡ್ಡಿರವರು ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಮನ್‌ವೆಲ್ತ್, ಟು.ಜಿ.ಸ್ಪೆಕ್ಟ್ರಂ, ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್ ಹಗರಣದಲ್ಲಿ ಹದಿನೆಂಟು ಲಕ್ಷ ಕೋಟಿ ರೂ.ಗಳ ಹಗರಣವೆಸಗಿದೆ. ಕಾಂಗ್ರೆಸ್‌ನವರ ಭ್ರಷ್ಠಾಚಾರವನ್ನು ತೊಳೆಯಲು ಇನ್ನು ಐದು ವರ್ಷಗಳ ಕಾಲಾವಕಾಶ ಬೇಕು. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ.ಗೆ ಮತ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ ಎಂದು ಜನತೆಯಲ್ಲಿ ವಿನಂತಿಸಿದರು.
ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಯಾವುದೆ ಅಹಿತಕರ ಘಟನೆ ನಡೆಯಲು ಅವಕಾಶ ಕೊಟ್ಟಿಲ್ಲ. ಜಾತಿ ಜಾತಿಗಳ ನಡುವೆ ಘರ್ಷಣೆಯಾಗಿಲ್ಲ. ಎಲ್ಲಾ ಜಾತಿಯವರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಆದ್ದರಿಂದ ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹೊರಗಿನಿಂದ ಬಂದು ಸ್ಪರ್ಧಿಸಿರುವವರನ್ನು ತಿರಸ್ಕರಿಸಿ ಸದಾ ನಿಮ್ಮ ನಡುವೆಯೂ ಇರುವ ನನ್ನನ್ನು ಬೆಂಬಲಿಸಿ ನಿಮ್ಮ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಯು.ಜಿ.ಡಿ.ಗೆ ೩೫ ಕೋಟಿ ರೂ.ಗಳನ್ನು ನಮ್ಮ ಸರ್ಕಾರ ಅಧಿಕಾರಲ್ಲಿದ್ದಾಗ ಮಂಜೂರು ಮಾಡಿತ್ತು. ಇನ್ನು ೧೦೭ ಕೋಟಿ.ರೂ.ಗಳು ಜಿಲ್ಲಾಡಳಿತದಲ್ಲಿದೆ. ನಾಲ್ಕುವರೆ ವರ್ಷದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ ಕ್ರಿಯಾ ಯೋಜನೆಗೆ ಸಹಿ ಹಾಕಿಲ್ಲ. ಇಲ್ಲಿಯವರೆಗೂ ಒಂದು ಸಭೆಯನ್ನು ಕರೆದು ಅಭಿವೃದ್ದಿ ಬಗ್ಗೆ ಚರ್ಚಿಸಿಲ್ಲ. ಮೆಡಕಲ್ ಕಾಲೇಜು ಚಿತ್ರದುರ್ಗಕ್ಕೆ ಮಂಜೂರಾಗಿದ್ದರೂ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗವನ್ನು ಅಮೃತ್‌ಸಿಟಿಗೆ ಆಯ್ಕೆ ಮಾಡಿ ನಾಲ್ಕು ನೂರು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಅದರಲ್ಲಿ ೧೨೨ ಕೋಟಿ ರೂ.ಗಳನ್ನು ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ಅಳವಡಿಸುವ ಕಾರ್ಯ ಬಳಸಲಾಗುತ್ತಿದೆ. ಇಲ್ಲಿಯವರೆಗೂ ನಗರದಲ್ಲಿ ಬಡವರಿಗೆ ಏಳು ಸಾವಿರ ಮನೆಗಳನ್ನು ನೀಡಿದ್ದೇನೆ. ಹದಿಮೂರು ಸಾವಿರ ಅರ್ಜಿಗಳು ನಗರಸಭೆ ಬಂದಿದೆ. ಅದರಲ್ಲಿ ಏಳು ಸಾವಿರ ಅರ್ಜಿಗಳು ಡೂಪ್ಲಿಕೇಟ್.ಸ ಮನೆ ಇದ್ದವರೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದರು.

ವೆಂಕಟೇಶ್ ಮತ್ತು ಅವರ ನೂರಾರು ಬೆಂಬಲಿಗರು ಬಿಜೆಪಿ.ಗೆ ಸೇರ್ಪಡೆಯಾದರು. ನಗರಸಭೆ ಮಾಜಿ ಸದಸ್ಯರುಗಳಾದ ಶ್ರೀನಿವಾಸ್, ಭಾಸ್ಕರ್, ಟಾಮಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.