ಚಿತ್ರದುರ್ಗ : ನಮಗೆ ಸಂತಾನ ಬೇಕೆಂದರೆ ಅದು ಗಂಡು ಮಗುವಾಗಬೇಕು. ಹೆಣ್ಣು ಮಗು ಬೇಡ ಎನ್ನುವವರೇ ಬಹಳಷ್ಟು ಜನ ಇದ್ದಾರೆ. ಎಮ್ಮೆ ಅಥವಾ ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದರೆ ಖುಷಿಯಾಗುತ್ತೇವೆ. ಆದರೆ ಒಂದು ಹೆಣ್ಣು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಬೇಡ ಎನ್ನುತ್ತೇವೆ. ಏಕೆ ಇಂತಹ ಸಂಕುಚಿತ ಮನೋಭಾವ ನಮ್ಮಲ್ಲಿದೆ. ನಮ್ಮದು ಎಂತಹ ಮಾನವೀಯತೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಶ್ನಿಸಿದರು.
ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಶ್ರೀಗಳು, ಕಾರ್ಯಕ್ರಮವನ್ನು ಅತ್ಯಂತ ಪ್ರೀತಿಯಿಂದ ಆಸ್ವಾದಿಸಬೇಕು. ಕಳೆದ ಕೆಲವು ತಿಂಗಳ ಹಿಂದೆ ಮೂರುದಿನದ ಮಗುವನ್ನು ಇಲ್ಲಿ ಬಿಟ್ಟುಹೋಗಿದ್ದರು. ಅದನ್ನು ಶ್ರೀಮಠ ಸಾಕುತ್ತಿದೆ. ಇಂತಹ ಎಷ್ಟೋ ಅನಾಥ ಮಕ್ಕಳು ಶ್ರೀಮಠದಲ್ಲಿ ಬೆಳೆಯುತ್ತಿದ್ದಾರೆ. ನಮ್ಮಲ್ಲಿ ಸಿಕ್ಕ ಮಗು ಹೆಣ್ಣುಮಗು ಅದು ಯಾವ ಜಾತಿಯದೋ ಗೊತ್ತಿಲ್ಲ. ಆದರೂ ಪ್ರೀತಿಯಿಂದ ಆ ಮಗುವಿನ ಆರೈಕೆ ಮಾಡಲಾಗುತ್ತಿದೆ. ಇಂತಹ ಅಂತಃಕರಣ ನಮಗೆ ಬೇಕು. ಯಾವ ಕಾರಣಕ್ಕಾಗಿ ಆ ಮಗುವನ್ನು ಬಿಟ್ಟು ಹೋಗಿದ್ದಾರೋ ಗೊತ್ತಿಲ್ಲ. ಇದಾವುದನ್ನು ಲೆಕ್ಕಿಸದೆ ನಾವು ಅದನ್ನು ಸಾಕುತ್ತಿzವೆ. ಯಾವುದೇ ಕಾರಣಕ್ಕೂ ಹೆಣ್ಣು ಕನಿಷ್ಠ ಗಂಡು ಶ್ರೇಷ್ಠ ಎಂಬ ತಾರತಮ್ಯ ಮಾಡಬಾರದು. ಭಾರತದಲ್ಲಿ ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ. ಇದೊಂದು ಅಮಾನವೀಯವಾದುದು. ಹೆಣ್ಣಿರಲಿ ಗಂಡಿರಲಿ ಮಗು ಒಂದೇ ಇರಲಿ ಎಂಬ ವಾಕ್ಯವನ್ನು ನೀವು ಪಾಲಿಸಬೇಕು ಎಂದರು.
ಅರಸೀಕೆರೆ ತಾಲ್ಲೂಕು ದೊಡ್ಡಮೇಟಿಕುರ್ಕೆಯ ಬೂದಾಳು ವಿರಕ್ತಮಠದ ಶ್ರೀ ಶಶಿಶೇಖರ ಸಿದ್ಧಬಸವ ಸ್ವಾಮಿಗಳು, ಉಪವಿಭಾಗಾಧಿಕಾರಿ ಎ.ಸಿ.ವಿಜಯಕುಮಾರ್,ರಾಣೇಬೆನ್ನೂರಿನ ಬಸವರಾಜ ಪಾಟೀಲ ಮಾತನಾಡಿದರು. ವೇದಿಕೆಯಲ್ಲಿ ದಾಸೋಹಿಗಳಾದ ಶ್ರೀಮತಿ ಟಿ.ಪಿ. ಈರಮ್ಮ ಮತ್ತು ಮಕ್ಕಳು, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಸತೀಶ್, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎನ್.ತಿಪ್ಪಣ್ಣ ಮುಂತಾದವರಿದ್ದರು. ಎಸ್.ಶಿವಕುಮಾರ್ ಆನಿವಾಳ (ಲಿಂಗಾಯತ) ಮತ್ತು ಹೆಚ್. ಶಾಂತಲಾ, ಉಜ್ಜಿನಿ (ಹಡಪದ) ಅಂತರ್‌ಜಾತಿ ವಿವಾಹ ಸೇರಿದಂತೆ ೪೦ ಜೋಡಿ ನವಜೋಡಿಗಳು ವಿವಾಹವಾದರು.