ಚಿತ್ರದುರ್ಗ: ಕೋವಿಡ್-19 ರ ಕಾರಣ ದೇಶದಲ್ಲಿ ವಿಧಿಸಿದ ಲಾಕ್‍ಡೌನ್‍ನಿಂದ ಜಿಲ್ಲೆಯಲ್ಲಿ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಹಾನಿಗೊಳಗಾದ ಹೂ ಬೆಳೆಗಳಿಗೆ ಪ್ರತಿ 01 ಹೆಕ್ಟರ್‍ಗೆ 25,000 ರೂ. ಗರಿಷ್ಠ ಪರಿಹಾರಧನ ನೀಡುವ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಫಲಾನುಭವಿಗೆ 01 ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ, ಪರಿಹಾರಧನ ನೀಡಲಾಗುವುದು. ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಮೇ 13 ರಿಂದ 28 ರೊಳಗೆ ಅರ್ಜಿಗಳನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.

ಸಲ್ಲಿಸಬೇಕಾದ ದಾಖಲಾತಿಗಳ ವಿವರ ಇಂತಿದೆ, ಫಲಾನುಭವಿಗಳು ರೈತರಾಗಿದ್ದು (ಆರ್‍ಟಿಸಿ) ಜಮೀನು ಅವರ ಹೆಸರಿನಲ್ಲಿರಬೇಕು ಹಾಗೂ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್‍ಪುಸ್ತಕದ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಜಂಟಿಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (ನೋಟರಿರವರಿಂದ ದೃಢೀಕರಣ ಮಾಡಿಸಿರಬೇಕು), ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನು ಇದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು. ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ, ಹೀಗಾಗಿ, ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.