ಚಿತ್ರದುರ್ಗ: ಹಿಂದಿನ ಶಾಸಕರ ಅವಧಿಯಲ್ಲಿ ಉದ್ಘಾಟನೆಗೊಂಡ ಕಾಮಗಾರಿಗಳನ್ನು ಮೊಳಕಾಲ್ಮರು ಶಾಸಕ ಬಿ.ಶ್ರೀರಾಮುಲು ಎರಡನೆ ಬಾರಿಗೆ ಉದ್ಘಾಟಿಸಿ ಶಂಕುಸ್ಥಾಪನೆ ನೆರವೇರಿಸಿರುವುದು ಮೂರ್ಖತನ ಎಂದು ಜಿ.ಪಂ.ಸದಸ್ಯ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಯೋಗೇಶ್‍ಬಾಬು ಆಪಾದಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಾನಗಲ್‍ನಲ್ಲಿ ಈ ಹಿಂದೆಯೇ ಉದ್ಘಾಟನೆಗೊಂಡಿದ್ದ ಐ.ಟಿ.ಐ.ಕಾಲೇಜಿಗೆ ಶಾಸಕ ಬಿ.ಶ್ರೀರಾಮುಲು ಎರಡನೆ ಬಾರಿಗೆ ಉದ್ಘಾಟಿಸಿ ಮೊಳಕಾಲ್ಮರು ತಾಲೂಕಿನ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಒಂದೆರಡು ಕಾಮಗಾರಿಗಳು ಉದ್ಘಾಟನೆಯಗಿರುವುದನ್ನು ಬಿಟ್ಟರೆ ಉಳಿದ ಎಲ್ಲವೂ ಹಿಂದಿನ ಶಾಸಕರ ಅವಧಿಯಲ್ಲಿ ಶಂಕುಸ್ಥಾಪನೆಯಾಗಿರುವುದು ಎನ್ನುವ ಸಾಮಾನ್ಯ ಜ್ಞಾನವು ಈಗಿನ ಶಾಸಕರಿಗೆ ಇಲ್ಲದಂತಾಗಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಆಹ್ವಾನ ಪತ್ರಿಕೆಯನ್ನು ಮುದ್ರಿಸದೆ ತರಾತುರಿಯಲ್ಲಿ ಕಾಮಗಾರಿಗಳನ್ನು ಉದ್ಘಾಟಿಸುವ ಅಗತ್ಯವೇನಿತ್ತು. ಯಾವುದೇ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಆಗಿರುವುದರಿಂದ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ತಿಳಿಸಿದರು.
ಮೊಳಕಾಲ್ಮುರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ತುಂಗಭದ್ರಾ ಹಿನ್ನೀರು ಕಾಮಗಾರಿ ಯೋಜನೆಗೆ ಹಿಂದಿನ ಸರ್ಕಾರ 1750 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದ್ಯಾವುದನ್ನು ತಿಳಿದುಕೊಳ್ಳದ ಶಾಸಕ ಬಿ.ಶ್ರೀರಾಮುಲು ಯೋಜನೆಗಾಗಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಚರ್ಚಿಸಿ ಹಣ ಮಂಜೂರು ಮಾಡಿಸಿಕೊಂಡು ಕ್ಷೇತ್ರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಸಾಮಥ್ರ್ಯ ಅವರಲ್ಲಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಎಸ್.ಎಫ್.ಸಿ.ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸಿ ಸ್ವಂತ ಹಣದಿಂದ ಬೋರ್‍ವೆಲ್‍ಗಳನ್ನು ಕೊರೆಸಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಆರುವರೆ ಕೋಟಿ ರೂ.ಕುಡಿಯುವ ನೀರಿಗೆ ಬಿಡುಗಡೆಯಾಗಿದೆ. ಇಸ್ರೇಲ್ ಮಾದರಿ ಕೃಷಿ ಮಾಡುವುದಾಗಿ ಹೇಳುತ್ತ ಕ್ಷೇತ್ರದ ಜನತೆಯನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದಿರುವ ಪ್ರದೇಶ ಮೊಳಕಾಲ್ಮುರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದ್ಯಾವುದರ ಪರಿವೇ ಇಲ್ಲದ ಬಿ.ಶ್ರೀರಾಮುಲು ಮಾಜಿ ಸಚಿವ ಎನ್ನುವುದನ್ನು ಮರೆತು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ದ್ರೋಹದ ಕೆಲಸ ಇನ್ನು ಮುಂದಾದರೂ ಜವಾಬ್ದಾರಿ ಅರಿತು ಜನಸೇವೆ ಮಾಡಲಿ ಎಂದರು.

ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‍ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಚಂದ್ರಪ್ಪ, ಓ.ಬಿ.ಸಿ.ಅಧ್ಯಕ್ಷ ತಿಪ್ಪೇಸ್ವಾಮಿ, ಯುವ ಕಾಂಗ್ರೆಸ್ ಅಧ್ಯಕ್ಷ ದಾದಾಪೀರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.