ಚಿತ್ರದುರ್ಗ: ನೂತನ ಪಿಂಚಣಿ ಪದ್ದತಿಯನ್ನು ರದ್ದುಪಡಿಸಿ ಹಳೆ ಪದ್ದತಿಯಲ್ಲಿ ಪಿಂಚಣಿ ನೀಡಿ ನಿವೃತ್ತರನ್ನು ಬದುಕಿಸಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ೧-೪-೨೦೧೬ ರಂದು ರಾಜ್ಯ ಸರ್ಕಾರ ಎನ್.ಪಿ.ಎಸ್.ಜಾರಿಗೆ ತಂದಿದೆ. ೧-೪-೨೦೦೪ ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದು ಮರಣಶಾಸನ ಎಂದು ನಮಗೆ ಗೊತ್ತಾಗಲು ತುಂಬಾ ತಡವಾಯಿತು. ೨೦೦೬ ರ ನಂತರ ನೇಮಕಗೊಂಡು ಒಂದು ಸಾವಿರ ನೌಕರರು ಮರಣ ಹೊಂದಿದ್ದಾರೆ. ಅವರ ಕುಟುಂಬಗಳಿಗೆ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ನೌಕರನ ಸಂಬಳದಲ್ಲಿ ಶೇ.೧೦ ಹಾಗೂ ಸರ್ಕಾರ ಶೇ.೧೦ ರಷ್ಟು ಹಣವನ್ನು ಸೇರಿಸಿ ನಿವೃತ್ತಿಯ ನಂತರ ಪಿಂಚಣಿ ನೀಡಬೇಕು. ಅದಕ್ಕಾಗಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿ ನೂತನ ಪಿಂಚಣಿ ಪದ್ದತಿಯನ್ನು ರದ್ದುಪಡಿಸಿ ಹಳೆ ಪದ್ದತಿಯಲ್ಲಿ ಪಿಂಚಣಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಗೊಂದಲವಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಈ ಹಿಂದೆ ಬೃಹತ್ ಹೋರಾಟ ಮಾಡಿದ್ದರಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹಳೆ ಪಿಂಚಣಿ ಪದ್ದತಿಯನ್ನು ರದ್ದುಪಡಿಸುವುದಾಗಿ ಹೇಳಿದ್ದರಿಂದ ಸರ್ಕಾರ ಹಲವಾರು ಬೇಡಿಕೆಗಳನ್ನು ಈಡೇರಿಸಿದೆ. ಕೆಲವು ಗೊಂದಲದಲ್ಲಿದೆ. ಈ ಆದೇಶಗಳು ನಮ್ಮ ಬೇಡಿಕೆಗಳನ್ನು ಭಾಗಶಃ ಈಡೇರಿಸಿದಂತಾಗಿದೆ. ಇದರಿಂದ ಸಮಸ್ತ ಎನ್.ಪಿ.ಎಸ್.ನೌಕರರಲ್ಲಿ ಹತಾಶೆಯನ್ನುಂಟು ಮಾಡಿದೆ ಎಂದು ಆಪಾದಿಸಿದರು.
ಎನ್.ಪಿ.ಎಸ್.ನೌಕರರಿಗೆ ಮರಣ ಮತ್ತು ನಿವೃತ್ತಿ ಉಪಧನವನ್ನು ಕೇಂದ್ರ ಸರ್ಕಾರದ ಮಾದರಿಯಂತೆ ದಿನಾಂಕ:೧-೪-೨೦೦೬ ರಿಂದಲೇ ಜಾರಿಗೊಳಿಸಬೇಕು. ಮರಣ ಹೊಂದಿರುವ ಎನ್.ಪಿ.ಎಸ್.ನೌಕರರ ಅವಲಂಭಿತರ ಕುಟುಂಬಗಳಿಗೆ ಪಿಂಚಣಿ ನೀಡಲು ಪ್ರಸ್ತುತ ವಿಧಿಸಿರುವ ಷರತ್ತನ್ನು ಮಾರ್ಪಡಿಸಿ ನೌಕರನ ಖಾತೆಗೆ ಸರ್ಕಾರ ಪಾವತಿಸಿರುವ ತನ್ನ ಪಾಲಿನ ಮೊತ್ತವನ್ನು ಮಾತ್ರ ಹಿಂಪಡೆಯವ ಷರತ್ತಿನೊಂದಿಗೆ ೧-೪-೨೦೦೬ ರಿಂದಲೇ ಕುಟುಂಬ ಪಿಂಚಣಿ ಮಾಡಿಕೊಡಲು ಅವಕಾಶ ಮಾಡಿಕೊಡಬೇಕು ಎಂದು ಡಾ.ಎಸ್.ಆರ್.ಲೇಪಾಕ್ಷ ವಿನಂತಿಸಿದರು. ಎನ್.ಪಿ.ಎಸ್.ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹನುಮಂತಪ್ಪ, ಜಿಲ್ಲಾ ಸಂಚಾಲಕ ಟಿ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಎಂ.ಅನಿಲ್, ಮೋಕ್ಷದಾಯಿನಿ, ಸಿದ್ದಪ್ಪಪಾಟೀಲ, ತಾಲೂಕು ಅಧ್ಯಕ್ಷ ಲಿಂಗರಾಜ ಎಸ್.ಇಟಗಿ, ಟಿ.ಶಿವಣ್ಣ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.