ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್‍ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತರು ತಾವು ಬೆಳೆದ ಅಥವಾ ದಾಸ್ತಾನು ಮಾಡಿಕೊಂಡಿರುವ ಹಣ್ಣು ಮತ್ತು ತರಕಾರಿಗಳನ್ನು ಆಯಾ ಮಾರುಕಟ್ಟೆಗೆ, ಹೊರ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ನೀಡಲಾಗಿದೆ.  ಜಿಲ್ಲೆಯ ತೋಟಗಾರಿಕೆ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಸಗಟು ವ್ಯಾಪಾರಿಗಳು ಖರೀದಿಸಿ ಮಾರಾಟ ಮಾಡಲು ಕೂಡ ಅನುಮತಿ ನೀಡಲಾಗಿದೆ.  ಸಗಟು ವ್ಯಾಪಾರಿಗಳು ತೋಟಗಾರಿಕೆಗೆ ಸಂಬಂಧಿಸಿದ ಕೂಲಿಕಾರರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಬೇಕು, ಮತ್ತು ಕಡ್ಡಾಯವಾಗಿ ಇವುಗಳನ್ನು ಉಪಯೋಗಿಸುವ ಮೂಲಕ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರಾಟ ವ್ಯವಹಾರ ನಡೆಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.