ಚಿತ್ರದುರ್ಗ: ಹಂದಿಗಳ ಸಾಂಕ್ರಮಿಕ ರೋಗ ಆಫ್ರಿಕನ್ ಸ್ವೈನ್ ಫೀವರ್ (ಎಎಸ್‍ಎಫ್) ತಡೆ ಹಾಗೂ ನಿಯಂತ್ರಣ ಸಂಬಂಧ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಅಂತರ ರಾಜ್ಯ ಗಡಿ ಭಾಗಗಳಲ್ಲಿ ಹಂದಿ ಮತ್ತು ಹಂದಿ ಆಹಾರ ಸಾಗಾಣಿಕೆ ಮತ್ತು ಹಂದಿ ವ್ಯಾಪಾರಸ್ಥರ ಚಲನವಲನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ.

ಆಫ್ರಿಕನ್ ಸ್ವೈನ್ ಫೀವರ್ ಇದು ಸಾಕು ಹಂದಿ ಮತ್ತು ಕಾಡು ಹಂದಿಗಳಲ್ಲಿ ಹರಡುವ ಮಾರಣಾಂತಿಕ ರೋಗವಾಗಿದ್ದು, ಇದು ಭಾರತ ದೇಶದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದೆ. ಇದು ಹಂದಿಗಳಿಂದ ಮಾನವರಿಗೆ ಹರಡುವ ಸಾಧ್ಯತೆ ಇರುವುದಿಲ್ಲ. ಆದರೆ ಹಂದಿ ಸಾಕಾಣಿಕೆದಾರರು, ವ್ಯಾಪಾರಸ್ಥರು, ಹಂದಿ ಆಹಾರ, ಉಣ್ಣೆ ರೋಗವನ್ನು ಹರಡುವ ವಾಹಕಗಳಾಗಿರುತ್ತವೆ. ಇತರೆ ರಾಜ್ಯಗಳಿಂದ ಕರ್ನಾಟಕ ರಾಜ್ಯದೊಳಗೆ ಸಾಗಾಣಿಕೆ ಮುಖಾಂತರ ಒಳಬರುವ ಜೀವಂತ ಹಂದಿ, ಹಂದಿ ಆಹಾರ ಇತ್ಯಾದಿಗಳಿಂದ ರೋಗ ಹರಡುವ ಸಾಧ್ಯತೆ ಇರುತ್ತದೆ.

ಜಾನುವಾರುಗಳಲ್ಲಿ ಸೋಂಕು ಹಾಗೂ ಸಾಂಕ್ರಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕಾಯ್ದೆ-2009 ಸೆಕ್ಷನ್-6 ಮತ್ತು 7 ರನ್ವಯ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಅಂತರ ರಾಜ್ಯ ಗಡಿ ಭಾಗಗಳ ಚೆಕ್‍ಫೋಸ್ಟ್‍ಗಳಲ್ಲಿ ಕಟ್ಟೆಚ್ಚರವಹಿಸಿ, ಹಂದಿ, ಹಂದಿ ಮರಿ, ಹಂದಿ ಆಹಾರ ಸಾಗಾಣಿಕೆ ಮತ್ತು ಹಂದಿ ವ್ಯಾಪಾರಸ್ಥರ ಚಲನವಲನಗಳನ್ನು ಮುಂದಿನ ಆದೇಶದವರೆವಿಗೂ ನಿಷೇಧಿಸಿ ಆದೇಶಿಸಿದೆ. ಈ ಕುರಿತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.