ಚಿತ್ರದುರ್ಗ: ಕಾಗಿನೆಲೆ ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳ ವಿರುದ್ಧ ಹಗುರವಾಗಿ ಮಾತನಾಡಿದ ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವಸ್ಥಾನದಿಂದ ಕೂಡಲೇ ಕಿತ್ತೊಗೆಯಬೇಕು ಎಂದು ಆಗ್ರಹಿಸಿ ಚಿತ್ರದುರ್ಗದಲ್ಲಿ ಹಾಲುಮತ ಮಹಾಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸಚಿವರ ಪ್ರತಿಕೃತಿದಹಿಸಿ ಕೋಟೆನಾಡಿನ ಕುರುಬರು ಆಕ್ರೋಶ ಹೊರಹಾಕಿದರು.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕಿನಿಂದ ಆಗಮಿಸಿದ ಕುರುಬ ಸಮುದಾಯದ ಬಂಧುಗಳು ನೀಲಕಂಠೇಶ್ವರ ದೇಗುಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮಾಡಿ ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಜಮಾವಣೆಗೊಂಡು ಸಚಿವರ ಪ್ರತಿಕೃತಿ ದಹಿಸಿ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವವಹಿಸಿದ್ದ ಜಿಲ್ಲಾ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ಸಚಿವರಾಗಿ, ತಾಳ್ಮೆಯಿಂದ ಜನರ ಮಾತುಗಳಿಗೆ ಸ್ಪಂದಿಸಬೇಕಾಗುತ್ತದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರ್‌ನಲ್ಲಿ ಶ್ರೀಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ್ದ ಹಿನ್ನಲೆಯಲ್ಲಿ ಹಾಲುಮತ ಸಮಾಜದ ಪರಮ ಪೂಜ್ಯರು, ಸಮಾಜದ ಹಿರಿಯರು, ಯುವಕರು ಭಾಗವಹಿಸಿದ್ದ ಶಾಂತಿ ಸಭೆಯಲ್ಲಿ ಜವಾಬ್ದಾರಿಯುತ ಸಚಿವರಾಗಿ, ಸಮಸ್ಯೆಗೆ ಸೌಜನ್ಯದಿಂದ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ವಿಫಲರಾಗಿ ಮತಾಂಧರಾಗಿ ಪರಮಪೂಜ್ಯರಿಗೂ ಗೌರವ ನೀಡದೇ ಒಂದು ಕೋಮಿನ ಪರವಹಿಸಿ ಅವರ ಕರ್ತವ್ಯವನ್ನು ಮರೆತು ತಾರತಮ್ಯ ಮಾಡಿರುವುದಲ್ಲದೆ ಪರಮ ಪೂಜ್ಯ ಈಶ್ವರಾನಂದಪುರಿ ಮಹಾಸ್ವಾಮಿಗಳನ್ನು ಏರುಧ್ವನಿಯಲ್ಲಿ ಏಕವಚನದಲ್ಲಿ ನಿಂದಿಸಿ ಪ್ರಮಾದ ಎಸಗಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್. ಮಂಜಪ್ಪ ಹಾಲುಮತ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಡಾ.ಎಂ.ಹೆಚ್. ಕೃಷ್ಣಮೂರ್ತಿ, ರಾಜ್ಯ ಸಂಚಾಲಕರಾದ ಮಾಲತೇಶ್ ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಶೇಖರ್, ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಬಿ ಗಣೇಶ್ ಉಗ್ರಾಣ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಎಂ.ನಿಶಾನಿ ಶಂಕರ್, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಜಿ.ಎನ್. ಜಗದೀಶ್, ಚಳ್ಳಕೆರೆ ತಾಲೂಕು ಅಧ್ಯಕ್ಷ ಎಂ.ಜೆ ರಾಘವೇಂದ್ರ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಅಣ್ಣಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್, ಹೊಸದುರ್ಗ ತಾಲೂಕು ಅಧ್ಯಕ್ಷ ರವೀಂದ್ರ, ನಗರಸಭೆ ಮಾಜಿ ಸದಸ್ಯ ರವಿಶಂಕರ್‌ಬಾಬು, ಟಿ.ಎಲ್, ಯೋಗಿ ಮಂಜುನಾಥ್ ಸಜ್ಜನಕೆರೆ ಸಿದ್ದಣ್ಣ ಪೈಲ್ವಾನ್ ತಿಪ್ಪೇಸ್ವಾಮಿ, ಮಾರ್ಕಂಡಪ್ಪ, ಸತೀಶ್ ಕ್ಯಾದಿಗೆರೆ, ಕೃಷ್ಣಮೂರ್ತಿ, ಮಂಜುನಾಥ್, ಸುರೇಶ್, ಮಾಳಪ್ಪನಹಟ್ಟಿ ಗ್ರಾಪಂ ಸದಸ್ಯ ಗುರುಸ್ವಾಮಿ, ಕುರಿನಾಗರಾಜ್, ಸಂಗೊಳ್ಳಿ ರಾಯಣ್ಣ ಸೇನೆಯ ಭರತ್, ಏಳುಕೋಟಿ, ಭಾಗೇಶ್ ಉಗ್ರಾಣ, ಬಂಜಾರ ವಿದ್ಯಾರ್ಥಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶ್, ಇತರರರು ಭಾಗಹಿಸಿದ್ದರು.