ಚಿತ್ರದುರ್ಗ: ಚಳ್ಳಕೆರೆ ತಾಲೂಕು ಹೆಗ್ಗೆರೆ ಗ್ರಾಮದಲ್ಲಿ ಕಬ್ಬಿಣ ಮತ್ತು ವಿದ್ಯುತ್ ಸ್ಟೀಲ್ ಕಂಪನಿ ಫ್ಯಾಕ್ಟ್ರಿಯಿಂದ ಹೊರ ಬರುವ ಧೂಳು ಬೆಳೆಗಳ ಮೇಲೆ ಆವರಿಸಿರುವುದರಿಂದ ಸುತ್ತಮುತ್ತಲಿನ ನೂರಾರು ಎಕರೆಯಲ್ಲಿ ಬೆಳೆದಿರುವ ಬೆಳೆಗಳು ಹಾನಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಸಾಣಿಕೆರೆ ಗ್ರಾ.ಪಂ.ವ್ಯಾಪ್ತಿಗೆ ಬರುವ ಹೆಗ್ಗೆರೆ, ಕಾಪರಹಳ್ಳಿ, ಜಡೆಕುಂಟೆ, ಹಿರಿಯೂರು ತಾಲೂಕು ಗೊಲ್ಲಹಳ್ಳಿ, ಕಂದಿಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಬೆಳೆಗಳಿಗೆ ಫ್ಯಾಕ್ಟ್ರಿಯಿಂದ ಹೊರಬರುವ ಧೂಳು ದುಷ್ಪರಿಣಾಮ ಬೀರುತ್ತಿದೆ. ಹಾಲಿನಂತೆ ಬೆಳ್ಳಗಿರಬೇಕಾಗಿದ್ದ ಬಿಳಿಜೋಳ ಇದರಿಂದ ಕಪ್ಪಗಾಗಿರುವುದನ್ನು ರೈತರು ಬೊಗಸೆಯಲ್ಲಿಡಿದು ಪ್ರತಿಭಟಿಸಿದರು.
ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಸಜ್ಜೆ, ನವಣೆ, ಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ ಹೀಗೆ ಎಲ್ಲಾ ಬೆಳೆಗಳು ಫ್ಯಾಕ್ಟ್ರಿಯ ಧೂಳಿನಿಂದ ಕಪ್ಪಾಗಿದೆ ಎನ್ನುವುದಕ್ಕೆ ಈ ಸಪ್ಪೆಗಳೆ ಸಾಕ್ಷಿ ಎಂದು ಜೊತೆಯಲ್ಲಿ ತಂದಿದ್ದ ಬೆಳೆಯನ್ನು ಪ್ರತಿಭಟನೆಯಲ್ಲಿ ಪ್ರದರ್ಶಿಸಿದರು. ಹೆಗ್ಗೆರೆ ಗ್ರಾಮದ ಸುತ್ತಮುತ್ತಲಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು