ಚಿತ್ರದುರ್ಗ: ಆತಂಕಾರಿ ಬೆಳವಣಿಗೆಯಲ್ಲಿ ಸೈದ್ದಾಂತಿಕ ಹೋರಾಟ ನಡೆಸಲು ಸಂಘಗಳು ಅತ್ಯವಶ್ಯವಕಾಗಿ ಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ, ಸಿ.ಐ.ಟಿ.ಯು.ಸಂಯೋಜಿತ ಚಿತ್ರದುರ್ಗ ವಿಭಾಗದ ಸಾರಿಗೆ ನೌಕರರ ಸಂಘದ ಉದ್ಘಾಟನೆ ಮತ್ತು ವಿಭಾಗೀಯ ಸಮಿತಿ ರಚನೆ ಹಾಗೂ ಚಿತ್ರದುರ್ಗ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳಲ್ಲಿ ನೌಕರರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಗುರುವಾರ ರಂಗಯ್ಯನಬಾಗಿಲು ಸಮೀಪವಿರುವ ಉಜ್ಜಯಿನಿ ಮಠದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಾರಿಗೆ ನಿಗಮಗಳಲ್ಲಿ ನೌಕರರು ಇಂದಿಗೂ ಆಡಳಿತ ವರ್ಗದಿಂದ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ, ಅನುಭವಿಸಿಕೊಂಡು ಬರುತ್ತಿದ್ದಾರೆ. ನಿರಂತರವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಸಣ್ಣಪುಟ್ಟ ಕಾರಣಗಳಿಗಾಗಿ ನೌಕರರ ವೇತನವನ್ನು ಕಡಿತಗೊಳಿಸಲಾಗುತ್ತಿದೆ. ಶೇ.೧೨ ರಷ್ಟು ವೇತನ ಹೆಚ್ಚಿಸಿದರೆ ಅರ್ಧಭಾಗದಷ್ಟು ಹಣವನ್ನು ದಂಡದ ರೂಪದಲ್ಲಿ ಸಾರಿಗೆ ಸಂಸ್ಥೆಗೆ ನೌಕರರು ಪಾವತಿಸುವಂತಾಗಿದೆ. ರಾಜ್ಯದ ನಾಲ್ಕು ವಿಭಾಗದಲ್ಲಿ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ೨೦೦ ಕ್ಕೂ ಹೆಚ್ಚು ಪ್ರಶಸ್ತಿ ಸಾರಿಗೆ ನಿಗಮಕ್ಕೆ ಬಂದಿದೆ. ಆದರೆ ಸಾರಿಗೆ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಐದನೂರರಿಂದ ಆರು ನೂರು ಕೋಟಿ ರೂ.ಗಳ ನಷ್ಟದಲ್ಲಿದೆ ಎಂದು ಹೇಳುತ್ತಿರುವುದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದು ಕರೆ ನೀಡಿದರು.
೬೫ ಸಾರಿಗೆ ನಿಗಮಗಳು ರಾಷ್ಟ್ರದಲ್ಲಿದೆ. ರಾಜ್ಯದಲ್ಲಿ ಒಂದು ಲಕ್ಷ ಇಪ್ಪತ್ತೈದು ಸಾವಿರ ನೌಕರರು ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ೨೦೧೫ ರಿಂದ ಸಂಸ್ಥೆಯನ್ನು ಖಾಸಗೀಕರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹುನ್ನಾರ ನಡೆಸುತ್ತಿರುವುದರ ವಿರುದ್ದ ಗಟ್ಟಿಯಾದ ಹೋರಾಟ ಮಾಡಬೇಕು. ರೋಡ್ ಸೇಫ್ಟಿ ಬಿಲ್ ಜಾರಿಗೆ ತರಲು ಹೊರಟಿರುವುದನ್ನು ತಡೆಯಬೇಕಾಗಿದೆ. ೧೯೬೧ ರಲ್ಲಿ ಐದು ಕೋಟಿ ರೂ.ಗಳಿಂದ ಆರಂಭವಾದ ಸಾರಿಗೆ ಸಂಸ್ಥೆ ಈಗ ಕನಿಷ್ಟವೆಂದರೆ ಐವತ್ತು ಕೋಟಿ ರೂ.ಗಳ ಆಸ್ತಿಯನ್ನು ಸಂಪಾದಿಸಿದೆ. ಇದಕ್ಕೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗಳ ಶ್ರಮವೇ ಕಾರಣ ಎಂಬುದನ್ನು ಆಡಳಿತ ಮಂಡಳಿ ಮರೆತಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಬಸ್ ನಿಲ್ದಾಣಗಳ ಸಮೀಪ ಐದುನೂರು ಮೀಟರ್ ಸುತ್ತಮುತ್ತ ಖಾಸಗಿ ಬಸ್‌ಗಳು ನಿಲ್ಲಬಾರೆದೆಂಬ ಕಡ್ಡಾಯವಿದೆ. ಇದಕ್ಕಾಗಿ ಹೈಕೋರ್ಟ್ ಆದೇಶ ಮಾಡಿದೆ. ಇದ್ಯಾವುದನ್ನು ಲೆಕ್ಕಿಸದೆ ಖಾಸಗಿ ಬಸ್‌ನವರು ಸರ್ಕಾರಿ ಬಸ್ ನಿಲ್ದಾಣಗಳ ಸಮೀಪವೇ ಬಸ್‌ಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇದರ ಬಗ್ಗೆ ಸಾರಿಗೆ ಸಂಸ್ಥೆಯವರು ಯಾರು ಕೇಳದಂತಾಗಿದ್ದಾರೆ. ಆಡಳಿತ ಮಂಡಳಿಯ ಕಿರುಕುಳ, ಒತ್ತಡವನ್ನು ಸಹಿಸಿಕೊಂಡು ಸಿಬ್ಬಂದಿ ಮೊದಲಿನಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಜ್ಯಾಧ್ಯಕ್ಷ ರೇವಪ್ಪ, ಸಿ.ಐ.ಟಿ.ಯು.ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಖಜಾಂಚಿ ಸಿ.ಕೆ.ಗೌಸ್‌ಪೀರ್, ಕಟ್ಟಡ ಕಾರ್ಮಿಕರ ಫೆಡರೇಷನ್ ಉಪಾಧ್ಯಕ್ಷ ಬಿ.ಸಿ.ನಾಗರಾಜಾಚಾರ್, ಮಹಮದ್ ಜಿಕ್ರಿಯಾಉಲ್ಲಾ, ಜಿಲ್ಲಾ ಖಜಾಂಚಿ ಷೇಕ್‌ಖಲೀಂ, ಎಸ್.ಸಿ.ಎಸ್.ಟಿ.ನೌಕರರ ಸಂಘದ ಅಧ್ಯಕ್ಷ ಬಾಬುರಾವ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು. ನಿರ್ವಾಹಕಿ ನೇತ್ರ ಸೇರಿದಂತೆ ಸಾರಿಗೆ ಸಂಸ್ಥೆಯ ನೌಕರರು ಹಾಜರಿದ್ದರು.