ಚಿತ್ರದುರ್ಗ: ಸೆಪ್ಟೆಂಬರ್ 20ರಂದು ಪೊಲೀಸ್ ಕಾನ್ಸ್‍ಟೇಬಲ್ (ನಾಗರೀಕ) ಮತ್ತು ಪೊಲೀಸ್ ಕಾನ್ಸ್‍ಟೇಬಲ್ (ನಾಗರೀಕ) (ಕಲ್ಯಾಣ ಕರ್ನಾಟಕ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ನಡೆಯಲಿದೆ.

 ಚಿತ್ರದುರ್ಗ ನಗರದಲ್ಲಿ 14 ಶಾಲಾ, ಕಾಲೇಜುಗಳಲ್ಲಿ, ಚಳ್ಳಕರೆ ನಗರದಲ್ಲಿ 05 ಮತ್ತು ಹಿರಿಯೂರು ನಗರದಲ್ಲಿ 07 ಶಾಲಾ, ಕಾಲೇಜುಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕಗಳನ್ನಾಗಲೀ, ಕೈಬರಹ ಚೀಟಿಗಳನ್ನಾಗಲಿ, ಪೇಜರ್, ಕ್ಯಾಲ್ಕುಲೇಟರ್, ಇಯರ್ ಫೋನ್, ಮೊಬೈಲ್ ಫೋನ್‍ಗಳನ್ನಾಗಲಿ ಪರೀಕ್ಷೆಗೆ ತರಲು ನಿಷೇಧಿಸಲಾಗಿರುತ್ತದೆ. ಅಭ್ಯರ್ಥಿಗಳು ಬೆಲೆ ಬಾಳುವವಸ್ತು, ಸಾಮಾಗ್ರಿಗಳನ್ನು ತರದಂತೆ ತಿಳಿಸಲಾಗಿದೆ. ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ.

ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ತಮ್ಮ ಕರೆ ಪತ್ರದಲ್ಲಿ ನಮೂದಾಗಿರುವ ಕಾಲೇಜಿನಲ್ಲಿ ಹಾಜರಿರಲು ಹಾಗೂ ಕರೆ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.