ಚಿತ್ರದುರ್ಗ: ಸಿಹಿನೀರು ಹೊಂಡದ ನೀರನ್ನು ಗಂಗಾಪೂಜೆಗೆ ಬಳಸುವುದರಿಂದ ಯಾರು ಗಲೀಜು ಮಾಡಬೇಡಿ ಎಂದು ನಗರಸಭೆ ಅಧ್ಯಕ್ಷ ಹೆಚ್.ತಿಮ್ಮಣ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರಸಭೆ ಸದಸ್ಯ ಎಸ್.ಬಿ.ಎಲ್.ಮಲ್ಲಿಕಾರ್ಜುನ್ ಜೊತೆ ಸೋಮವಾರ ಸಿಹಿನೀರು ಹೊಂಡಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರು ಹೊಂಡದಲ್ಲಿ ಸಂಗ್ರಹವಾಗಿದ್ದ ಲೋಡ್‍ಗಟ್ಟಲೆ ಪಾಚಿಗಳನ್ನು ಹೊರೆಗೆ ತೆಗೆಯುತ್ತಿರುವುದನ್ನು ವೀಕ್ಷಿಸಿ ಮಾತನಾಡಿದ ಅಧ್ಯಕ್ಷರು ನಗರಸಭೆ ಹಿಂದಿನ ಅಧ್ಯಕ್ಷ ಹೆಚ್.ಎನ್.ಮಂಜುನಾಥಗೊಪ್ಪೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‍ರವರ ಸಹಕಾರದಿಂದ ಸಿಹಿನೀರು ಹೊಂಡದ ಹೂಳೆತ್ತಿಸಿ ಅತ್ಯುತ್ತಮ ಕಾರ್ಯ ಮಾಡಿದ್ದರಿಂದ ಈಗ ಹೊಂಡದಲ್ಲಿ ನೀರು ನಿಂತಿದೆ. ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಉಚ್ಚಂಗಿ ಯಲ್ಲಮ್ಮ, ಏಕನಾಥೇಶ್ವರಿ ಅಮ್ಮನವರ ಜಾತ್ರೆ, ಸಿಡಿ, ಭೇಟಿ ಸಂದರ್ಭಗಳಲ್ಲಿ ಗಂಗಾಪೂಜೆಗೆ ಸಿಹಿನೀರು ಹೊಂಡಕ್ಕೆ ಅನಾದಿ ಕಾಲದಿಂದಲೂ ಆಗಮಿಸುತ್ತಿರುವುದುಂಟು. ಶ್ರಾವಣ ಸಮೀಪಿಸುತ್ತಿದೆ. ಹಾಗಾಗಿ ಫೋಟೋ, ಹೂವಿನ ಹಾರ, ಇನ್ನಿತರೆ ಗಲೀಜನ್ನು ಸಿಹಿನೀರು ಹೊಂಡಕ್ಕೆ ಸುರಿಯಬೇಡಿ ಎಂದು ಸಿಹಿನೀರು ಹೊಂಡದ ಸುತ್ತಮುತ್ತಲಿನ ನಿವಾಸಿಗಳಲ್ಲಿ ವಿನಂತಿಸಿದರು.
ಗೋಪಾಸ್ವಾಮಿ ಹೊಂಡ ಭರ್ತಿಯಾದರೆ ಅಕ್ಕ-ತಂಗಿ ಹೊಂಡದ ಮೂಲಕ ಹರಿದು ಬರುವ ನೀರು ಸಿಹಿನೀರು ಹೊಂಡ ಸೇರುತ್ತದೆ. ಇಲ್ಲಿ ಕೋಡಿ ಬಿದ್ದರೆ ಸಂತೇಹೊಂಡ ಭರ್ತಿಯಾಗುತ್ತದೆ. ಆದ್ದರಿಂದ ಸಿಹಿನೀರು ಹೊಂಡವನ್ನು ಗಲೀಜು ಮಾಡದೆ ಸ್ವಚ್ಚತೆಯನ್ನು ಕಾಪಾಡುವಂತೆ ಜನತೆಯಲ್ಲಿ ಅಧ್ಯಕ್ಷ ಹೆಚ್.ತಿಮ್ಮಣ್ಣ ಕೋರಿದರು.
ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್‍ಪೆಕ್ಟರ್ ಅಶೋಕ್, ಸದಸ್ಯೆ ಮಹದೇವಿ ಲೋಕೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.