ಸಿಯೋಲ್: ’ಹಾರುವ ಹಕ್ಕಿಗಳಿಗೆ, ಹರಿಯುವ ನದಿಗಳಿಗೆ ಯಾವ ದೇಶದ ಗಡಿಯ ಹಂಗೂ ಇಲ್ಲ; ಅವುಗಳಿಗೆ ಪಾಸ್ ಪೋರ್ಟ್, ವೀಸಾ ಬೇಕಿಲ್ಲ. ಖಂಡಾಂತರಗಳನ್ನು ಅಡೆತಡೆ ಇಲ್ಲದೆ ಕ್ರಮಿಸುವ ಅವುಗಳನ್ನು ಯಾವ ದೇಶದ ಗಡಿಗಳೂ ದಾಟದಂತೆ ತಡೆಯಲಾರವು. ಅವುಗಳಂತೆ ವಿಶ್ವ ಕುಟುಂಬಿಗಳಾಗಿ ಶಾಂತಿಯುತ ಸಹಬಾಳ್ವೆ ನಡೆಸುವ ಪಣವನ್ನು ಮನುಷ್ಯ ಇಂದು ಕೈಗೊಳ್ಳಬೇಕು’ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ಫೆ. ೭ ರಿಂದ ೧೧ ರವರೆಗೆ ಅಂತರಾಷ್ಟ್ರೀಯ ಶಾಂತಿ ಸುಭದ್ರತೆ ಮತ್ತು ಮಾನವ ಅಭಿವೃದ್ಧಿ ಎಂಬ ವಿಷಯವಾಧರಿತ ’ವಿಶ್ವ ಶೃಂಗ ಶಾಂತಿ’ ಸಮ್ಮೇಳನದಲ್ಲಿ ಶುಕ್ರವಾರ ಪ್ರಬಂಧ ಮಂಡಿಸಿದ ಅವರು ’ಕ್ರಿಶ್ಚಿಯನ್ನರು, ಹಿಂದೂಗಳು, ಮುಸ್ಲಿಮರು, ಬೌದ್ಧರು ಜಗತ್ತಿನಲ್ಲಿ ಬಹು ಸಂಖ್ಯೆಯಲ್ಲಿ ಇದ್ದಾರಾದರೂ ಸಹಮಾನವರನ್ನು ಪ್ರೀತಿಸುವ ಸರಳ ಮಾನವರು ಅತ್ಯಲ್ಪವಾಗಿದ್ದಾರೆ, ಇಹ ಮತ್ತು ಪರಗಳೆರಡರಲ್ಲೂ ಸುಖ ಮತ್ತು ಶಾಂತಿ ಮನುಷ್ಯನಿಗೆ ದೊರೆಯಬೇಕೆಂಬುದು ಎಲ್ಲ ಧರ್ಮಗಳ ಧ್ಯೇಯವಾಗಿದೆ, ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಬೋಧಿಸಿಲ್ಲವಾದರೂ ಧರ್ಮದ ಕಾರಣಕ್ಕೆ ಹಿಂಸಾಚಾರ ರಕ್ತಪಾತ ನಡೆಯದ ದೇಶವೇ ಇಲ್ಲವೆಂಬುದು ದೊಡ್ಡ ದುರಂತ’ ಎಂದು ಅಭಿಪ್ರಾಯಪಟ್ಟರು.

’ಪ್ರತಿದೇಶಕ್ಕೂ ರಾಜಕೀಯ ಪ್ರೇರಿತ ಭೌಗೋಲಿಕ ಗಡಿಗಳು ಇರುತ್ತವೆ. ಆದರೆ ಧರ್ಮಗಳ ಆಧಾರದ ಮೇಲೆ ಮನುಷ್ಯರು ತಮ್ಮದೇ ಆದ ಮಾನಸಿಕ ಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಧರ್ಮಗಳ ಗಡಿಗಳು ಮನುಷ್ಯರನ್ನು ಮಾನಸಿಕವಾಗಿ ವಿಂಗಡಿಸಿ ಇಟ್ಟಿವೆ. ದೇಶಗಳನ್ನು ಬೇರ್ಪಡಿಸುವ ಭೌಗೋಲಿಕ ಗಡಿಗಳು ಕಾಲ ಕಾಲಕ್ಕೆ ಬದಲಾದರೂ ಮಾನಸಿಕವಾಗಿ ನಿರ್ಮಾಣಗೊಂಡ ಅಗೋಚರ ಧಾರ್ಮಿಕ ಗಡಿಗಳು ಎಂದೂ ಬದಲಾಗಲಾರವು. ಧರ್ಮದ ಕಾರಣಕ್ಕೆ ಜೀವಮಾನದಲ್ಲೇ ಎಂದೂ ನೋಡಿರದ ದೂರದೇಶದ ಸ್ವಧರ್ಮೀಯ ವ್ಯಕ್ತಿ ನೆರೆಮನೆಯವನೇ ಆದ ಅನ್ಯ ಧರ್ಮೀಯನಿಗಿಂತ ಆತ್ಮೀಯನಾಗುತ್ತಾನೆ. ಧರ್ಮಾಂಧತೆಯಿಂದ ಹಿಂಸೆ ಜಗತ್ತಿನಲ್ಲಿ ಮೇರೆ ಮೀರಿದೆ. ೧೨ ನೆಯ ಶತಮಾನದ ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರು ದಯೆಗೆ ಧರ್ಮವೇ ಮೂಲವೆಂದು ಸಾರಿದರು. ದಯಾಮೂಲವಾದ ಧರ್ಮ ನಮ್ಮದಾಗಬೇಕು. ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಶಾಂತಿ ನೆಲೆಗೊಳ್ಳಬೇಕು’ ಎಂದು ಪೂಜ್ಯರು ತಿಳಿಸಿದಾಗ ಶೃಂಗ ಸಮ್ಮನೇಳನದಲ್ಲಿ ನೆರೆದಿದ್ದ ಜಗತ್ತಿನ ಮಾಜಿ ಮತ್ತು ಹಾಲಿ ಸರ್ಕಾರದ ಮುಖ್ಯಸ್ಥರು, ಸಂಸದೀಯ ಪಟುಗಳು, ಧಾರ್ಮಿಕ ನಾಯಕರು, ಮಹಿಳಾ ಮುಖಂಡರು ಕರತಾಡನ ಮಾಡಿ ಸ್ವಾಗತಿಸಿದರು.