ಚಿತ್ರದುರ್ಗ: ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಿಂಗಾಯತರೆ ಬೇರೆ, ವೀರಶೈವರೆ ಬೇರೆ ಎಂದು ಹೊಡೆದಾಳುವ ನೀತಿ ಅನುಸರಿಸುತ್ತಿರುವುದು ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ ಎಂದು ಬಿಜೆಪಿ ಮಾಧ್ಯಮ ರಾಜ್ಯ ಸಹ ವಕ್ತಾರ ಅನ್ವರ್ ಮಾನ್ಪಾಡಿ ಅಸಮಾಧಾನ ವ್ಯಕ್ತಪಡಿಸಿದರು.
ನವೀನ್ ರೀಜೆನ್ಸಿಯಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ-ದಾವಣಗೆರೆ ವಿಭಾಗದ ಬಿಜೆಪಿ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷರು ವಿಷ ಬೀಜ ಬಿತ್ತಿ ದೇಶವನ್ನು ಹೊಡೆದಾಳಿದ ರೀತಿಯಲ್ಲಿಯೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಿಂಗಾಯಿತರು-ವೀರಶೈವರು ಪ್ರತ್ಯೇಕ ಎಂಬ ಗೊಂದಲ ಸೃಷ್ಠಿಸಿ ಕೋಲಾಹಲ ಉಂಟು ಮಾಡಲು ಹೊರಟಿರುವುದು ಅವರಿಗೆ ಶೋಭೆ ತರುವುದಿಲ್ಲ. ನಡೆದಾಡುವ ದೇವರು ಎಂದೆ ಹೆಸರಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಸತಾಯುಷಿ ಶಿವಾಚಾರ್ಯ ಮಹಾಸ್ವಾಮಿಗಳೇ ಧರ್ಮವನ್ನು ವಿಂಗಡಿಸುವುದು ಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೂ ಮನ್ನಣೆ ಕೊಡದ ಮುಖ್ಯಮಂತ್ರಿ ಸಿದ್ದಾಮಯ್ಯನವರ ಹೊಡೆದಾಳುವ ಕುತಂತ್ರವನ್ನು ಜಗತ್ತಿನಲ್ಲಿ ಯಾರು ಮಾಡಿಲ್ಲ. ಇಲ್ಲಿಯವರೆಗೂ ರಾಜ್ಯವನ್ನಾಳಿದ ಯಾವ ಮುಖ್ಯಮಂತ್ರಿಯೂ ಇದಕ್ಕೆ ಕೈಹಾಕಿರಲಿಲ್ಲ. ಆದರೆ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸೋಲುತ್ತೇನೆಂದು ಹೆದರಿ ವಿಂಗಡಣೆ ಮಾಡಲು ಹೊರಟಿದ್ದಾರೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಬಾಳಿಕೆ ಬರುವುದಿಲ್ಲ ಎಂದು ಹೇಳಿದರು.
ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದಕ್ಕೆ ಲಿಂಗಾಯತ-ವೀರಶೈವರಲ್ಲಿಯೇ ವಿರೋಧವಿದೆ. ಕೆಲವು ನಾಯಕರುಗಳು ಅಧಿಕಾರದ ಆಸೆಗಾಗಿ ಇಂತಹ ಕುತಂತ್ರ ಮಾಡುತ್ತಿದ್ದಾರೆ. ಇನ್ನು ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕನಸು ೧೫೦ ಸೀಟು ಗೆಲ್ಲುವುದಕ್ಕಿಂತಲೂ ೧೭೦ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಆಗ ರಾಜ್ಯದ ಜನತೆ ನೆಮ್ಮದಿಂದ ಇರಬಹುದು ಎಂದರು.
ರಾಜ್ಯಾದ್ಯಂತ ಬಿಜೆಪಿ ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮನೆ ಮನೆಗೆ ನಡಿಗೆ ಹಮ್ಮಿಕೊಂಡು ಜನರ ಸುಃಖ-ದುಃಖಗಳ ಮಾಹಿತಿಗಳನ್ನು ಸಂಗ್ರಹಿಸಿ ಪಕ್ಷದ ನಾಯಕರುಗಳಿಗೆ ನೀಡುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾದುದು ಎಂದು ತಿಳಿಸಿದರು.
ರಾಜ್ಯದಲ್ಲಿ ಒಂಬತ್ತು ವಲಯಗಳನ್ನು ಮಾಡಲಾಗಿದೆ. ಅದರಂತೆ ಚಿತ್ರದುರ್ಗ-ದಾವಣಗೆರೆಯನ್ನು ಒಂದು ವಲಯವನ್ನಾಗಿ ಮಾಡಿ ಜನಸಾಮಾನ್ಯರಿಂದ ಮಾಹಿತಿಗಳನ್ನು ಸಂಗ್ರಹಿಸಿ ಗೊಂದಲಗಳನ್ನು ನಿವಾರಿಸಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಮಾಧ್ಯಮ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡುತ್ತ ಜನಸಂಘದಿಂದಲೂ ಮಾಧ್ಯಮಕ್ಕೆ ಪ್ರಾತಿನಿಧ್ಯ ಕೊಡುವ ರಾಜಕೀಯ ಪಕ್ಷ ನಮ್ಮದು. ವ್ಯಕ್ತಿತ್ವ ವಿಕಸನ ಮಾಡುವುದು ಮಾಧ್ಯಮ ಕಾರ್ಯಗಾರದ ಕೆಲಸ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದು ಬಿಜೆಪಿ ಮಾಧ್ಯಮ ಕಾರ್ಯಕರ್ತರ ಜವಾಬ್ದಾರಿ ಹಾಗೂ ಪಕ್ಷದ ಕಾರ್ಯಚಟುವಟಿಕೆ, ವಿಷಯವನ್ನು ಮಾಧ್ಯಮದವರಿಗೆ ಹೇಗೆ ಮುಟ್ಟಿಸಬೇಕು ಎಂಬುದು ಬಹಳ ಮುಖ್ಯ ಎಂದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮಾಧ್ಯಮದವರೊಡನೆ ಯಾವ ರೀತಿ ಭಾಂದವ್ಯವಿಟ್ಟುಕೊಳ್ಳಬೇಕು ಎಂಬುದು ನಮ್ಮ ಪಕ್ಷದ ಮಾಧ್ಯಮ ಕಾರ್ಯಕರ್ತರ ಕೆಲಸ. ಮಾಧ್ಯಮದ ಮೂಲಕವೇ ದೇಶದ ೨೧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಕಾಂಗ್ರೆಸ್ ಭ್ರಷ್ಠಾಚಾರ ಹಾಗೂ ಬಿಜೆಪಿಯ ಸಾಧನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಧ್ಯಮ ಕಾರ್ಯಕರ್ತರು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಹ ಪ್ರಭಾರಿ ಜಿ.ಎಂ.ಸುರೇಶ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇಂದ್ರೆ, ದಾವಣಗೆರೆಯ ವಕ್ತಾರ ಕೊಂಡಜ್ಜಿಜಯಪ್ರಕಾಶ್, ನಗರ ಮಂಡಲ ಅಧ್ಯಕ್ಷ ಪಿ.ಲೀಲಾಧರಠಾಕೂರ್ ವೇದಿಕೆಯಲ್ಲಿದ್ದರು.
ದಾವಣಗೆರೆಯ ಮಾಧ್ಯಮ ವಕ್ತಾರ ಧನುಷ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮಲ್ಲಿಕಾರ್ಜುನ್, ಸಹ ವಕ್ತಾರ ಗೌತಂಜೈನ್, ಡಿ.ಎಂ.ತಿಪ್ಪೇಸ್ವಾಮಿ, ಕೇಶವಮೂರ್ತಿ, ದಿನೇಶ್‌ರೆಡ್ಡಿ, ನಾಗೇಶ್, ಚಿತ್ರರವಿ, ಬಿ.ಜಿ.ಗಿರೀಶ್‌ಕುಮಾರ್, ದಿಲೀಪ್‌ಕುಮಾರ್, ಶಂಭು ಮಾಧ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.