ಚಿತ್ರದುರ್ಗ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ವಸ್ತುಗಳಾದ ಸಿಗರೇಟ್, ಬೀಡಿ, ಪಾನ್ ಪರಾಗ್ ಸೇವನೆ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಆಯೋಜಿಸಿದ ‘ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ಶಾಲಾ ಆವರಣ, ಸರ್ಕಾರಿ ಕಛೇರಿಗಳ ಸುತ್ತ ಮುತ್ತ ಸಿಗರೇಟ್ ಬೀಡಿ ಸೇವನೆ ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಸೂಚನಾ ಫಲಕಗಳನ್ನು ಅಳವಡಿಸಬೇಕು. ಅಂಗಡಿ ಹಾಗೂ ಹೋಟೆಲ್‍ಗಳ ಮೇಲೆ ತಂಬಾಕು ಉತ್ತನ್ನ ಕಂಪನಿಗಳ ಜಾಹೀರಾತನ್ನು ಹಾಕಿಕೊಂಡಿರುತ್ತಾರೆ ಅಂತಹ ಜಾಹೀರಾತನ್ನು ಹಾಕದಂತೆ ತಿಳಿಸಿ, ಒಂದು ವೇಳೆ ತಂಬಾಕು ಜಾಹೀರಾತನ್ನು ಹಾಕಿದರೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

8 ವರ್ಷದೊಳಗಿನ ಮಕ್ಕಳಿಂದ ತಂಬಾಕು ಉತ್ಪಾದಿಸುವುದಾಗಲಿ ಅಥವಾ ಮಾರಾಟ ಮಾಡಿಸುವುದು ಕಂಡುಬಂದಲ್ಲಿ ಅಂತಹ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಶಾಲೆಗಳ ಸುತ್ತಮುತ್ತ 100 ಯಾರ್ಡ್ ದೂರ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆ ನಿಷೇದಿಸಿದರು ಕೆಲವು ಕಡೆ ಧೂಮಪಾನ ಮಾಡುತ್ತಿದ್ದಾರೆ ಎಂದರು ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಎ.ಜೆ ಆಂಥೋನಿ ಶಾಲೆಯ ಸುತ್ತ ಯಾವುದೇ ರೀತಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ, ಒಂದು ವೇಳೆ ಮಾರಾಟ ಮಾಡಿದರೆ ದೂರು ನೀಡಲು ಆಯಾ ಶಾಲೆಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದರು.

ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಿಲ್ಲಿ ತಂಬಾಕು ಸೇವನೆ ಹಾಗೂ ಮಾರಾಟ ನಿಯಂತ್ರಸುವಲ್ಲಿ ಕೈಗೊಂಡಿರುವ ಕ್ರಮಗಳನ್ನು ತಿಳಿಸಿ ಎಂದಾಗ ಪೊಲೀಸ್ ಅಧಿಕಾರಿ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸುವವರನ್ನು ಸೆಕ್ಷನ್ 4ರ ನಿಯಮದಡಿ ಕೇಸ್ ದಾಖಲಿಸಿ 100 ರೂ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್, ಪ್ರೊಬೇಷನರಿ ಜಿಲ್ಲಾಧಿಕಾರಿ ನಂದಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರೇಣುಪ್ರಸಾದ್, ತಹಶೀಲ್ದಾರ್ ನಹೀದಾ ಜಂ ಜಂ, ಜಿಲ್ಲಾ ಸಲಹೆಗಾರ ಬಿ.ಎಂ ಪ್ರಭುದೇವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.