ಚಿತ್ರದುರ್ಗ: ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸವನ್ನು ರೋಟರಿ ಸಂಸ್ಥೆ ಮಾಡಿಕೊಂಡು ಬರುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಬೆಳ್ಳಿ ಮಹೋತ್ಸವದ ಅಂಗವಾಗಿ ಮೆದೆಹಳ್ಳಿ ರಸ್ತೆಯಲ್ಲಿರುವ ಮರುಳಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ವೈ.ಆರ್.ಆದಿಶೇಷ ರೋಟರಿ ಭವನ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಸೇವೆಯ ಜೊತೆಗೆ ಬಡ ಮಕ್ಕಳ ಮತ್ತು ಅನಾಥ ಮಕ್ಕಳಿಗೆ ಸಹಾಯ ಮಾಡಿಕೊಂಡು ಬರುತ್ತಿರುವ ರೋಟರಿ ಸಂಸ್ಥೆ ಇನ್ನು ಹೆಚ್ಚು ಹೆಚ್ಚು ಸಾರ್ವಜನಿಕ ಸೇವೆ ಮಾಡಲಿ. ಆದಿಶೇಷರ ಹೆಸರಿನ ಮೇಲೆ ಭವನ ಕಟ್ಟಿರುವುದು ಅತ್ಯಂತ ಸಂತೋಷದ ಸಂಗತಿ. ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು ಕಟ್ಟುವ ಕಟ್ಟಡಗಳು ಕಳಪೆಯಾಗಿರುತ್ತವೆ. ಅದರೆ ರೋಟಿರಿ ಸಂಸ್ಥೆ ಕಟ್ಟಿರುವ ಈ ಭವನ ಉತ್ತಮ ಗುಣಮಟ್ಟದಿಂದ ಕೂಡಿದೆ. ಪ್ರಕೃತಿ ವಿಕೋಪ, ಭೂಕಂಪ, ಅಪಘಾತವಾದಾಗ ಸರ್ಕಾರ ಎಷ್ಟೆ ಸಹಾಯ ಮಾಡಿದರೂ ರೋಟರಿಯಂತ ಸಂಸ್ಥೆ ಸ್ವಯಂ ಆಗಿ ನೆರವಿಗೆ ಮುಂದೆ ಬರುತ್ತದೆ. ಸುತ್ತಮುತ್ತಲಿನ ಸಮಸ್ಯೆಗಳಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲಿ ಎಂದು ಹಾರೈಸಿದರು.
ರೊಟೇರಿಯನ್ ಪಿ.ಹೆಚ್.ಎಫ್. ಎಂ.ಕೆ.ರವೀಂದ್ರ ಮಾತನಾಡಿ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಇಪ್ಪತ್ತೈದು ವರ್ಷಗಳನ್ನು ಪೂರೈಸಿರುವುದು ಸುಲಭದ ಮಾತಲ್ಲ. ಮೂರು ಓವರ್‌ಹೆಡ್ ಟ್ಯಾಂಕ್, ಆರು ಬೋರ್‌ವೆಲ್‌ಗಳನ್ನು ನಿರ್ಮಿಸಿ ಅಲ್ಲಲ್ಲಿ ಕುಡಿಯುವ ನೀರಿಸ ಸೌಲಭ್ಯಗಳನ್ನು ಒದಗಿಸಲಾಗಿದೆ. ಉಚಿತ ಆರೋಗ್ಯ ತಪಾಸಣೆ, ಪ್ರತಿಭಾ ಪುರಸ್ಕಾರ, ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ರೋಟರಿ ಸಂಸ್ಥೆ ಹಿಂದಿನಿಂದಲೂ ಶ್ರಮಿಸುತ್ತಿದ್ದು, ಈಗ ಅನಕ್ಷರತೆ ನಿರ್ಮೂಲನೆಗೆ ಪಣತೊಟ್ಟಿದೆ ಎಂದು ಹೇಳಿದರು.
ಪ್ರಸಾದ್‌ರವರಿಂದ ಹಿಡಿದು ಇಲ್ಲಿಯವರೆಗೂ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‌ಗೆ ೨೨ ಮಂದಿ ಅಧ್ಯಕ್ಷರುಗಳಾಗಿದ್ದಾರೆ. ಈಗಿನ ಅಧ್ಯಕ್ಷ ಅರುಣ್‌ಕುಮಾರ್‌ರವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಎಲ್ಲಾ ಸದಸ್ಯರುಗಳ ಸಹಕಾರವಿದೆ ಎಂದು ಗುಣಗಾನ ಮಾಡಿದರು.
ಆರ್.ಐ.ಡಿ೩೧೬೦ ಕೆ.ಮಧುಪ್ರಸಾದ್, ಎಲ್.ಬಿ.ನೀಲಕಂಠಯ್ಯ, ಪಿ.ಎಸ್.ಶಂಭುಲಿಂಗಪ್ಪ, ಮೆದೇಹಳ್ಳಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್, ವೈ.ಚಂದ್ರಶೇಖರಯ್ಯ, ಮಾಧುರಿಮಧುಪ್ರಸಾದ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಹೆಚ್.ಎಸ್.ಸುಂದರ್‌ರಾಜ್, ರೋಟರಿ ಕ್ಲಬ್ ಅಧ್ಯಕ್ಷ ಜಿ.ಎ.ವಿಶ್ವನಾಥ್, ಎಂ.ಜೆ.ರಾಘವೇಂದ್ರ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಮಾರುತಿಮೋಹನ್, ಮಹಡಿಶಿವಮೂರ್ತಿ, ಪಿ.ಎಲ್.ಸುರೇಶ್‌ರಾಜು, ಆರತಿ ಮಹಡಿ ಶಿವಮೂರ್ತಿ, ಗಾಯತ್ರಿ ಶಿವರಾಂ, ರೋಟರಿ ಕ್ಲಬ್ ಚಿತ್ರದುರ್ಗಫೋರ್ಟ್, ರೋಟರಿ ಫೋರ್ಟ್ ಟ್ರಸ್ಟ್‌ನ ಸದಸ್ಯರುಗಳು ಇಪ್ಪತ್ತೈದನೆ ವರ್ಷದ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.