ಚಿತ್ರದುರ್ಗ: ಕಳೆದ ಮೂವತ್ತು ವರ್ಷಗಳ ಹಿಂದೆ ಪ್ರೊ.ಬಿ.ಕೃಷ್ಣಪ್ಪನವರು ದಲಿತರು ಹಿಂದುಳಿದವರಿಗೆ ಅಧ್ಯಯನ ಶಿಬಿರಗಳನ್ನು ನೀಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಜಾಗೃತಿಗೊಳಿಸುತ್ತಿದ್ದರು. ಅಂತಹ ತರಬೇತಿಗಳು ಇಂದಿನ ಪರಿಸ್ಥಿತಿಗೆ ಅತ್ಯವಶ್ಯಕವಾಗಿ ಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪಂಗಡದ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಹೇಳಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟ, ನಿವೃತ್ತ ನೌಕರರ ಒಕ್ಕೂಟ, ಸಾಮಾಜಿಕ ಸಂಘರ್ಷ ಸಮಿತಿ, ವಿದ್ಯಾರ್ಥಿ ಒಕ್ಕೂಟದ ಸಹಯೋಗದೊಂದಿಗೆ ಅಮೃತ ಆಯುರ್ವೇದಿಕ್ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ದಲಿತ ಹಿಂದುಳಿದವರಿಗೆ ಸಂಬಂಧಿಸಿದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ತಳಪಾಯದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರು ಹಾಕಿಕೊಟ್ಟಿರುವ ಮಾರ್ಗದರ್ಶನ ಮತ್ತು ಆಚಾರ ವಿಚಾರಗಳನ್ನು ಎಲ್ಲರೂ ಪಾಲಿಸಬೇಕಿದೆ. ಪ್ರಸ್ತುತ ದಿನಮಾನಗಳಲ್ಲಿ ಇಂತಹ ಅಧ್ಯಯನ ಶಿಬಿರಗಳಿಂದ ದಲಿತರು ಮತ್ತು ಹಿಂದುಳಿದವರ ಭೌದ್ದಿಕ ಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರಲ್ಲಿ ಈಗಲೂ ದೊಡ್ಡ ಗೊಂದಲವಿರುವುದರಿಂದ ನೂರಕ್ಕೆ ಶೇ.೩ ರಷ್ಟಿರುವ ಮೇಲ್ಜಾತಿಯವರು ನಮ್ಮ ಮೇಲೆ ಇನ್ನು ಸವಾರಿ ಮಾಡುತ್ತಿದ್ದಾರೆ. ಇದರ ವಿರುದ್ದ ಮೊದಲು ದಲಿತರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ನಮ್ಮಲ್ಲಿ ಗೊಂದಲವಿರುವುದರಿಂದಲೇ ಬ್ರಾಹ್ಮಣಶಾಹಿಗಳು ಐದಾರು ಸಾವಿರ ವರ್ಷಗಳಿಂದ ನಮ್ಮನ್ನು ಆಳಿಕೊಂಡು ಬರುತ್ತಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ ಎಲ್ಲರೂ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಆದರೂ ನಮ್ಮದು ಇನ್ನು ಗುಲಾಮಗಿರಿ ಬದುಕಿನಿಂದ ಹೊರಬರಲು ಆಗುತ್ತಿಲ್ಲ. ದಲಿತರು, ಹಿಂದುಳಿದವರು ಪ್ರಾಚೀನ ಭಾರತದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಎಂಬುದನ್ನು ದಾಖಲೆ ಸಮೇತ ನೀಡಬಹುದು. ಸಂಗೀತ, ಯೋಗ, ನಾಟ್ಯಶಾಸ್ತ್ರ, ಸಾಹಿತ್ಯ ದಲಿತರಲ್ಲಿಯೂ ಇದೆ. ಸಿಂಧುಸಂಸ್ಕೃತಿ, ಗಂಗಾನಾಗರೀಕತೆ ಬಗ್ಗೆ ಚರ್ಚೆಯಾಗಬೇಕಿದೆ. ದೇಶದ ಹುಟ್ಟು ಆಗಿದ್ದೆ ಸಿಂದುಬಯಲಲ್ಲಿ. ಬುದ್ದನಿಗೆ ದಲಿತರ, ಹಿಂದುಳಿದವರ, ಸಿಂಧು, ಗಂಗಾ ಸಂಸ್ಕೃತಿಗೆ ಇರುವ ಸಂಬಂಧ ಏನು ಎನ್ನುವುದು ಈಗಿನ ದಿನಗಳಲ್ಲಿ ಚರ್ಚೆ ಪ್ರಸ್ತುತ ಎಂದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ಕಮಾನಿ, ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಚಿಕ್ಕಣ್ಣ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.