ಚಿತ್ರದುರ್ಗ: ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಸರಕು ಸಾಗಾಟ ವಾಹನಗಳಿಗೆ ಮತ್ತು ಚಾಲಕರಿಗೆ ಯಾವುದೇ ನಿರ್ಬಂಧವಿಲ್ಲದೆ ಸಂಚರಿಸಲು ಸರ್ಕಾರ ಅವಕಾಶ ನೀಡಿದೆ.

ಎಲ್ಲ ವರ್ಗದ ಸರಕು ಸಾಗಾಟದ ವಾಹನಗಳ ಚಾಲಕರು ತನಿಖಾಧಿಕಾರಿಗಳಿಂದ ತೊಂದರೆ ಆಗುತ್ತದೆಂಬ ಆತಂಕಕ್ಕೆ ಒಳಗಾಗದೆ, ವಾಹನಗಳನ್ನು ಓಡಾಟ ನಡೆಸಲು ಈ ಮೂಲಕ ಸೂಚನೆ ನೀಡಲಾಗಿದೆ.  ಈಗಾಗಲೆ ಜಿಲ್ಲಾಧಿಕಾರಿಗಳು, ಸರಕು ಸಾಗಾಟ ವಾಹನಗಳ ಸಂಚಾರಕ್ಕೆ ಮತ್ತು ಸರಕು ಸಾಗಾಣಿಕೆ ವಾಹನಗಳ ಚಾಲಕರಿಗೆ ಅವರವರ ವಾಸ ಸ್ಥಳದಿಂದ ವಾಹನ ನಿಲುಗಡೆ ಸ್ಥಳಕ್ಕೆ ತೆರಳಲು ಯಾವುದೇ ಅಡ್ಡಿ ಮಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರಕು ಸಾಗಾಣಿಕೆ ವಾಹನಗಳ ದಾಖಲಾತಿಗಳ ಅವಧಿ ಮುಕ್ತಾಯವಾಗಿದ್ದರೂ, ಸಹ ಅವುಗಳ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.  ಹೀಗಾಗಿ ಎಲ್ಲ ವರ್ಗದ ಸರಕು ಸಾಗಾಣಿಕೆ ವಾಹನಗಳು ನಿಲುಗಡೆ ಮಾಡುವ ಅವಶ್ಯಕತೆ ಇರುವುದಿಲ್ಲ.  ಎಲ್ಲಾ ಚಾಲಕರು, ತಮ್ಮ ವಾಹನದ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ತಪ್ಪದೆ ಕಾಪಾಡಿಕೊಳ್ಳಬೇಕು.

ತ್ರಿಚಕ್ರ ಸರಕು ಆಟೋರಿಕ್ಷಾ ಹಾಗೂ ಲಘು ವಾಣಿಜ್ಯ ವಾಹನಗಳು ತರಕಾರಿ ಮಾರುಕಟ್ಟೆ ಬಳಿ ಸಾಮಾಜಿಕ ಅಂತರ ಕಾಯ್ದುಕೊಂಡು, ಸಾರ್ವಜನಿಕರಿಗೆ ಬಾಡಿಗೆ ಆಧಾರದಲ್ಲಿ ಲಭ್ಯವಾಗುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.