ಚಿತ್ರದುರ್ಗ: ಚದುರಿದ ಸಮಾಜವನ್ನು ಒಗ್ಗೂಡಿಸಿದವರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು, ಸಂಘಟನೆ ಮೂಲಕ ರಾಜಕೀಯ ಶಕ್ತಿ ತುಂಬಿದರು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಭೋವಿ ಗುರುಪೀಠದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 35ನೇ ಜನ್ಮದಿನೋತ್ಸವದ ಅಂಗವಾಗಿ ಶನಿವಾರ ಕೊರೊನಾ-19 ಪ್ರಯುಕ್ತ ಸರಳವಾಗಿ ನಡೆದ ಭೋವಿ ಜನತ್ಸೋಹದಲ್ಲಿ ಮಾತನಾಡಿದವರು ಸಮಾಜದ ಎಲ್ಲಾ ವರ್ಗವನ್ನು ವಿಶ್ವಾಸದಿಂದ ಕರೆದುಕೊಂಡು ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 2019ರ ನವೆಂಬರ್-3 ರಂದು ನಾನು ಸಮಾವೇಶವನ್ನು ಆಯೋಜಿಸಿದ್ದೆ. ಆ ಸಮಾವೇಶಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರಲ್ಲಿ ಮನವಿಮಾಡಿ ಶ್ರೀಮಠಕ್ಕೆ ಅನುದಾನ ನೀಡುವಂತೆ ಕೋರಿದೆವು. ಆಗ ರೂ.5 ಕೋಟಿ ಅನುದಾನ ಬಿಡುಗಡೆಗೊಳಿಸಿದರು. ಮಠದ ಅಭಿವೃದ್ದಿಗೆ ಸಹಕರಿಸಿದರು ಎಂದು ಹೇಳಿದರು.

ನಮ್ಮ ಮಧ್ಯೆ ಏನೇ ಗೊಂದಲ ಸಮಸ್ಯೆ ಇರಲಿ ಎಲ್ಲಾರೂ ಒಗ್ಗಟ್ಟಾಗಿ ಹೋಗೋಣ. ನಮ್ಮೆರಲ್ಲೂ ಒಗ್ಗಟ್ಟು ಮೂಡಿದಾಗ ಮಾತ್ರ ರಾಜಕೀಯವಾಗಿ ಶಕ್ತವಂತರಾಗಲು ಸಾಧ್ಯ. ನನ್ನ ಕ್ಷೇತ್ರಕ್ಕೆ ಒಂದುವರೆ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ. ಈ ಅಭಿವೃದ್ಧಿ ಭೋವಿ ಎಂ.ಎಲ್.ಎ. ಮಾಡುತ್ತಿದ್ದಾರೆ ಎನ್ನುವ ಮನೋಭಾವ ಮೂಡುತ್ತದೆ. ಇಂತಹ ಕೆಲಸ ಮಾಡಿದ ನನ್ನನ್ನು 4 ಬಾರಿ ಶಾಸಕರನ್ನಾಗಿ ಜನ ಆಶೀರ್ವಾದಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಉತ್ತಮವಾದ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡರೆ ಸ್ವಾಮೀಜಿಗಳ ಆಶೀರ್ವಾದ ಇದ್ದೇ ಇರುತ್ತದೆ. ಉತ್ತಮ ಕೆಲಸ ಯಾರು ಮಾಡುತ್ತಾರೋ ಅವರನ್ನು ಸಮಾಜ ಗುರುತಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿದ್ದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿಸಮಾಜದ ಏಳಿಗೆಗಾಗಿ ಸಮಾಜದ ಎಲ್ಲರನ್ನೂ ಒಂದುಗೂಡಿಸಿಕೊಂಡು ನಿರಂತರವಾಗಿ ಶ್ರಮಿಸುತ್ತಿರುವ ಫಲವಾಗಿ ಒಂದೊಂದೆ ಕಾರ್ಯಗಳು ಯಶಸ್ವಿಯಾಗುತ್ತಿವೆ. ಬಸವಾದಿಶರಣರ ತತ್ವದಡಿಯಲ್ಲಿ ಸಮಾನತೆಯ ಸಮಾಜವನ್ನು ನಿರ್ಮಾಣಮಾಡುವ ಕಾರ್ಯ ಸಾಗುತ್ತಿದೆ. ಸಮುದಾಯದ ಎಲ್ಲಾ ವಲಯದ ನಾಯಕರುಗಳು ಸ್ಪಂಧಿಸುತ್ತಿರುವುದರಿಂದ ಯಶಸ್ವಿಯತ್ತ ಸಾಗಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮೀಜಿ, ಕುಚಿಂಟಿಗ ಮಹಾಸಂಸ್ಥಾನಮಠದ ಡಾ. ಶಾಂತವೀರಸ್ವಾಮೀಜಿಯವರು ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಅಥಣಿ ಗರ್ಚಿನ ಮಠದ ಶಿವಬಸವ ಸ್ವಾಮಿಜಿ, ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ, ಮಾಚಿದೇವ ಗುರುಪೀಠದ ಮಡಿವಾಳ ಮಾಚಿದೇವ ಸ್ವಾಮೀಜಿ, ತಂಗಡಿಗಿಯ ಅಡಪದ ಅಪ್ಪಣ್ಣ ಗುರುಪೀಠದ ಅನ್ನಧಾನಿ ಭಾರತಿ ಅಪ್ಪಣ್ಣಸ್ವಾಮೀಜಿ, ಚಳ್ಳಕೆರೆ ಕಿರಣಸ್ವಾಮೀಜಿ, ದಾವಣಗೆರೆ ಬಸವಪ್ರಭುಸ್ವಾಮೀಜಿ, ಶಿರಸಿ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ, ರಾಯಚೂರಿನ ಬಸವ ಪ್ರಸಾದ ಸ್ವಾಮೀಜಿ, ಹರಳಯ್ಯಗುರುಪೀಠದ ಹರಳಯ್ಯಸ್ವಾಮೀಜಿ, ಓಂವೃಕ್ಷಾಶ್ರಮದ ತಿಪ್ಪೇರುದ್ರಸ್ವಾಮೀಜಿ ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಹೆಚ್.ಲಕ್ಷ್ಮಣ, ನಿರ್ದೇಶಕರಾದ ಆಂಜನೇಯ, ಡಿ.ಸಿ.ಮೋಹನ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಪ್ರಕಾಶ್, ಮಾಜಿ ನಗರಸಭಾ ಅಧ್ಯಕ್ಷ ಚಂದ್ರಶೇಖರ್, ಚಳ್ಳಕೆರೆ ಆಂಜನೇಯ, ತಿಮ್ಮಣ್ಣ, ಕಾಳಘಟ್ಟ ಹನುಮಂತಪ್ಪ, ಜಗಳೂರು ತಾಲ್ಲೂಕು ಭೋವಿ ಸಂಘದ ಅಧ್ಯಕ್ಷ ದೇವರಾಜ್, ಪ್ರಾಚಾರ್ಯ ಕನಕದಾಸ, ಸಿಇಓ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ಬಿಇಓ ವೆಂಕಟೇಶ್, ಇಂಜಿನಿಯರ್ ಶಿವಮೂರ್ತಿ, ಸಬ್‍ಇನ್ಸ್‍ಪೆಕ್ಟರ್ ಮಾರುತಿ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಹೆಚ್.ವೆನಲಾ, ಶ್ರೀಹಾಸ್ಟಿನಿ.ಬಿ.ಡಿ ಇವರಿಗೆ ಸನ್ಮಾನಿಸಲಾಯಿತು.