ಚಿತ್ರದುರ್ಗ: ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಪೊಲೀಸರು ಅಂಗಡಿಗಳನ್ನು ತೆರೆಯಲು ಬೆಳಗಿನ ಅವಧಿಯಲ್ಲಿ ಇಂತಿಷ್ಟೇ ಸಮಯ ಎಂದು ನಿಗದಿಪಡಿಸಿ ತಾಕೀತು ಮಾಡುತ್ತಿದ್ದಾರೆ.  ಹೀಗಾಗಿ ವರ್ತಕರಲ್ಲಿ ಬಹಳಷ್ಟು ಗೊಂದಲ ಉಂಟಾಗಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು, ಅಂಗಡಿಗಳಿಗೆ ಸಮಯ ನಿಗದಿಪಡಿಸುವಂತೆ ಪೊಲೀಸ್ ಇಲಾಖೆ ಯಾವುದೇ ತಾಲ್ಲೂಕುಗಳಿಗೆ ಸೂಚನೆ ನೀಡಿಲ್ಲ ಎಂದರು.

ಸಂಜೆ 7 ರಿಂದ ಬೆಳಿಗ್ಗೆ 7 ರವೆಗೆ ಕಪ್ರ್ಯೂ ಇರುತ್ತದೆ. ಈ ಕಪ್ರ್ಯೂ ಅತ್ಯವಶ್ಯಕ ವಸ್ತುಗಳಿಗೆ ಅನ್ವಯಿಸುವುದಿಲ್ಲ.  ಸಾರ್ವಜನಿಕರು ಅನಾವಶ್ಯಕವಾಗಿ ಈ ಸಮಯದಲ್ಲಿ ಓಡಾಟ ನಡೆಸುವಂತಿಲ್ಲ.  ಕಫ್ರ್ಯೂ ಅವಧಿಯನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ತಾಲ್ಲೂಕುಗಳಲ್ಲಿ ಅನುಮತಿಸಿರುವ ವಾಣಿಜ್ಯ ಚಟುವಟಿಕೆಯ ಅಂಗಡಿಗಳು ತೆರೆಯಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್-19 ಕುರಿತಂತೆ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ  ಸುಳ್ಳು ಮಾಹಿತಿ ಅಥವಾ ವದಂತಿಗಳನ್ನು ಹಾಕಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪೊಲೀಸ್ ಇಲಾಖೆ ಸೋಷಿಯಲ್ ಮಾನಿಟರಿಂಗ್ ತಂಡವನ್ನು ರಚಿಸಿದ್ದು, ಫೇಸ್‍ಬುಕ್, ವ್ಯಾಟ್ಸಪ್, ಟೆಲಿಗ್ರಾಂ, ಮುಂತಾದ ಸಾಮಾಜಿಕ ಜಾಲತಾಣಗಳ ಬಗ್ಗೆ ತಂಡವು ನಿಗಾ ವಹಿಸುತ್ತಿದೆ. ಹಾಗಾಗಿ ಯಾರೂ ಸಹ ಅಪಪ್ರಚಾರದಲ್ಲಿ ತೊಡಗಬಾರದು. ಸಾರ್ವಜನಿಕರು ಮಾಹಿತಿ ಪಡೆಯಲು ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ವಾರ್‍ರೂಂಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು