ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಮತದಾರರ ಜಾಗೃತಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದೃಢ ಪ್ರಜಾಪ್ರಭುತ್ವದಲ್ಲಿ ನಾನೂ ಭಾಗಿ, ಸಹಿ ಸಂಗ್ರಹ ಅಭಿಯಾನಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಮತದಾರರ ಜಾಗೃತಿಯ ಸ್ವೀಪ್ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಎಫಿಕ್ ರೈಡ್ ಬೈಕ್ ರ್‍ಯಾಲಿಗೆ ಹಸಿರು ನಿಶಾನೆ ತೋರಿ, ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಚುನಾವಣೆಯಲ್ಲಿ ಸಕ್ರಿಯರಾಗಿ ಭಾಗವಹಿಸಬೇಕು. ಹಾಗೂ ಮಹಿಳಾಸ್ನೇಹಿ ಸರ್ಕಾರಗಳನ್ನು ತರುವಲ್ಲಿಯು ಸಹ ಮಹಿಳೆಯರು ಹೆಚ್ಚು ಪಾಲ್ಗೂಳ್ಳುವಿಕೆಯಿಂದ ಸಾಧ್ಯವಾಗಲಿದೆ. ಯಾರು ಸಹ ಮಹಿಳಾ ಸಬಲೀಕರಣ ಮಾಡಲು ಸಾಧ್ಯವಿಲ್ಲ, ಇದು ನಮ್ಮ ಬುದ್ದಿವಂತಿಕೆ ಹಾಗೂ ಮನಸ್ಸಿನಿಂದ ಪ್ರಾರಂಭವಾಗಬೇಕು. ಈ ಹಿನ್ನೆಲೆಯಲ್ಲಿ ಮಹಿಳೆಯರು ಮನೆಯಿಂದ ಹೊರಬಂದು ಮತದಾನ ಮಾಡಿದಾಗ ಇದು ಸಾಧ್ಯವಾಗಲಿದೆ ಎಂದರು.
ಎಫಿಕ್ ರೈಡ್ ಬೈಕ್ ರ್‍ಯಾಲಿಯಲ್ಲಿ ಸಾಕಷ್ಟು ಮಹಿಳೆಯರು ಭಾಗವಹಿಸಿದ್ದು ನಿಜವಾಗಲು ಅರ್ಥಯುತವಾದ ಕಾರ್ಯಕ್ರಮವಾಗಿದೆ. ಮಹಿಳೆಯರು ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಇತರೆಯವರಿಗೆ ಸ್ಪೂರ್ತಿಯಾಗಿದ್ದಾರೆ. ಬೆಂಗಳೂರಿನಿಂದ ಈ ರೈಡರ್‍ಸ್ ಆಗಮಿಸಿದ್ದು, ಚಿತ್ರದುರ್ಗ ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಿದ್ದು ಯುವ ಜನತೆಯಲ್ಲಿ ಉತ್ಸಾಹವನ್ನು ತುಂಬಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಪಿ.ಎನ್.ರವೀಂದ್ರರವರು ಮಾತನಾಡಿ ಮತದಾರರ ಜಾಗೃತಿಗೆ ಬೈಕ್ ರ್‍ಯಾಲಿ ಹಾಗೂ ಸಹಿ ಸಂಗ್ರಹ ಅಭಿಯಾನವನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ಶಾಲಾ ಮಕ್ಕಳ ಪೋಷಕರಿಂದ ಮತದಾನ ಸಂಕಲ್ಪ ಪತ್ರವನ್ನು ಪಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿನ ನೂತನ್ ವಿದ್ಯಾಸಂಸ್ಥೆಯಲ್ಲಿ ಪೋಷಕರಿಂದ ಮತದಾನ ಸಂಕಲ್ಪ ಪತ್ರ ಪಡೆಯಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಜವರೇಗೌಡ, ತಹಶೀಲ್ದಾರ್ ಮೋಹನ್‌ಕುಮಾರ್, ಪೌರಾಯುಕ್ತ ಎಂ.ಕೆ.ನಲವಡಿ, ಎಫಿಕ್ ರೈಡರ್‍ಸ್ ತಂಡದ ದಶಮಿ ಮೋಹನ್ ಹಾಗೂ ಅಖಿಲೇಶ್, ನೂತನ್ ಸಂಸ್ಥೆಯ ಮಂಜುನಾಥ್ ಹಾಗೂ ಇನ್ನಿತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.