ಚಿತ್ರದುರ್ಗ: ರಾಜಕೀಯದಲ್ಲಿ ಅಧಿಕಾರದಲ್ಲಿದ್ದಾಗ ಮಾತ್ರ ಏನಾದರೂ ಜನಸೇವೆ ಮಾಡಲು ಸಾಧ್ಯ ಎನ್ನುವುದನ್ನು ಮನಗಂಡು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ವಿ.ಪಾಳ್ಯದ ವಿ.ಎಸ್.ಭೂತರಾಜ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕುಟುಂಬ ರಾಜಕಾರಣ, ಕೋಟಿಗಟ್ಟಲೆ ಹಣವುಳ್ಳವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎನ್ನುವ ಕೆಟ್ಟ ಸಂಪ್ರದಾಯಕ್ಕೆ ಸಿಡಿದೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಎಂ.ಬಿ.ಎ.ಪದವೀಧರನಾಗಿರುವ ನಾನು ಅನೇಕ ವರ್ಷಗಳಿಂದಲೂ

ಹೋರಾಟದ ಮೂಲಕ ಜನಸೇವೆ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.
ನಿವೃತ್ತ ಐ.ಎ.ಎಸ್., ಐ.ಪಿ.ಎಸ್.ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪ್ರತಿ ವರ್ಷವೂ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಆದರೆ ಬಡ ಪ್ರತಿಭಾವಂತರು ಆಯ್ಕೆಯಾಗುವುದಿಲ್ಲ. ಇದರಿಂದ ನಿಜವಾಗಿಯೂ ಅರ್ಹರಿರುವವರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ನ್ಯಾಯಕ್ಕಾಗಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದು, ಕರ್ನಾಟಕದಲ್ಲಿ ಹೊಸ ಪಕ್ಷ ರಚನೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗುವುದು ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸುವವರು ವಿವಿಧ ಪಕ್ಷಗಳ ನಾಯಕರುಗಳ ಬಳಿ ಹೋಗಿ ಟಿಕೇಟ್ ಕೇಳಿದರೆ ನಿನ್ನ ಹತ್ತಿರ ಎಷ್ಟು ಕೋಟಿ ರೂಪಾಯಿಯಿದೆ ಮೊದಲು ಹೇಳು ಎಂದು ಕೇಳುವಂತ ಕೀಳುಮಟ್ಟದ ರಾಜಕಾರಣ ಕಂಡು ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಗೆಲ್ಲುವವರು ಹಾಕಿದ ಬಂಡವಾಳ ದುಡಿದುಕೊಳ್ಳುವ ಕಡೆ ಮನಸ್ಸು ಮಾಡುತ್ತಾರೆಯೇ ವಿನಃ ಕ್ಷೇತ್ರದ ಬಡ ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಅನ್ಯಾಯದ ವಿರುದ್ದ ನಾಲ್ಕೈದು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ನನಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರು ಆರ್ಶೀವದಿಸಿದರೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.
ಲಂಕೇಶ್, ಪೃಥ್ವಿ, ನಾಗೇಶ್, ಮಂಜುನಾಥ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.