ಧಾರವಾಡ: ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಹೆಬ್ಬಳ್ಳಿ, ಮಾರಡಗಿ, ಸೋಮಾಪುರದ ವಿವಿಧ ರೈತರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಆ ರೈತರ ಕುಟುಂಬಸ್ಥರಿಗೆ ಸರ್ಕಾರದಿಂದ ಬಂದ ಪರಿಹಾರದ ಚೆಕ್ ಗಳನ್ನು ನೀಡಿದರು.

ತಾಲೂಕಿನ ಮಾರಡಗಿ ಗ್ರಾಮದ ರೈತ ಸೈದುಸಾಬ್ ಮುಕ್ತಂಸಾಬ್ ದರಗದ ಅವರು ಸಾಲ ಬಾಧೆ ತಾಳಲಾರದೇ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪತ್ನಿ ರೆಹಮತ್ ಬಿ ಅವರಿಗೆ ಸಚಿವ ವಿನಯ ಅವರು, ಸರ್ಕಾರದಿಂದ ಬಂದ ಐದು ಲಕ್ಷ ರೂಪಾಯಿಯ ಚೆಕ್ ವಿತರಿಸಿ ಸಾಂತ್ವನ ಹೇಳಿದರು.

ಸೋಮಾಪುರ ಗ್ರಾಮದ ಹನುಮಂತಪ್ಪ ನಾವಳ್ಳಿ ಮತ್ತು ವನಹಳ್ಳಿ ಗ್ರಾಮದ ರಾಮಪ್ಪ ನಾಗಪ್ಪ ಹೆಬ್ಬಳ್ಳಿ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಕನ್ನು ಸಚಿವರು ವಿತರಿಸಿದರು. ಸಚಿವರೊಂದಿಗೆ ತಾಲ್ಲೂಕಾ ಪಂಚಾಯತ ಅಧ್ಯಕ್ಷ ಯಲ್ಲಪ್ಪಗೌಡ ಭಾವಿಕಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಚನಬಸಪ್ಪ ಮಟ್ಟಿ, ಹಿರಿಯರಾದ ಯುಸುಫ್ ದರಗದ, ಸಿದ್ದಣ್ಣ ಪ್ಯಾಟಿ, ಫಿರೋಜ ನಾಯ್ಕರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.