ಚಿತ್ರದುರ್ಗ: ಸಂಸದ ಬಿ.ಎನ್.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ರಘುಆಚಾರ್ ಜಿಲ್ಲೆಯ ಅಭಿವೃದ್ದಿ ಕುರಿತು ಅಪ್ಪಿತಪ್ಪಿಯೂ ಮಾತನಾಡದವರು ಈಗ ದಿಢೀರ್ ಎಂದು ಜಿಲ್ಲೆ ಬಗ್ಗೆ ಅಭಿಮಾನ ತೋರಿಸುತ್ತಿರುವುದು ನಾಟಕೀಯ ಬೆಳವಣಿಗೆ ಎಂದು ಕೆ.ಎಸ್.ನವೀನ್ ವ್ಯಂಗ್ಯವಾಡಿದರು.

ಪತ್ರಿ ಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಂಸದ ಚಂದ್ರಪ್ಪ ಚಿತ್ರದುರ್ಗ ಜಿಲ್ಲೆಗೆ ಹಣ ಕೊಡಿ ಎಂದು ಕೇಳಿದ್ದಾರೆ. ಮತ್ತೊಂದೆಡೆ ವಿಧಾನಪರಿಷತ್ ಸದಸ್ಯ ರಘುಆಚಾರ್ ಮೆಡಿಕಲ್ ಕಾಲೇಜು ಚಿತ್ರದುರ್ಗದಿಂದ ಬೇರೆ ಕಡೆಗೆ ಸ್ಥಳಾಂತರವಾದರೆ ರಾಜೀನಾಮೆ ನೀಡುತ್ತೇನೆಂದು ಹೇಳುತ್ತಿರುವುದು ಸರಿಯಲ್ಲ. ಅಭಿವೃದ್ದಿ ವಿಷಯವಾಗಿ ರಘುಆಚಾರ್ ಜಿಲ್ಲೆಗೆ ಎಂದು ಬಂದಿದ್ದಾರೆ ಎಂದು ಪ್ರಶ್ನಿಸಿದರು.

ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ಏಳು ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದರು. ಆ ಪೈಕಿ ಈಗಾಗಲೇ ಆರು ಕಡೆ ಮೆಡಿಕಲ್ ಕಾಲೇಜು ಆರಂಭವಾಗಿದೆ. ಚಿತ್ರದುರ್ಗದಲ್ಲಿ ಇನ್ನು ಏನು ಆಗಿಲ್ಲ. ಐದು ವರ್ಷ ರಾಜ್ಯದಲ್ಲಿ ಅವರ ಸರ್ಕಾರವೇ ಇದ್ದಾಗ ಏಕೆ ಒತ್ತಡ ಹಾಕಲಿಲ್ಲ. ಇದುವರೆವಿಗೂ ಎಲ್ಲಿಯೂ ತುಟಿಬಿಚ್ಚದ ಚಂದ್ರಪ್ಪ ಹಾಗೂ ರಘುಆಚಾರ್ ಇವರುಗಳು ಈಗ ದುತ್ತೆಂದು ಜಿಲ್ಲೆಯ ಅಭಿವೃದ್ದಿಗಾಗಿ ಮೈಕೊಡವಿಕೊಂಡು ಎದ್ದುನಿಂತಿರುವುದನ್ನು ನೋಡಿದರೆ ಇದೊಂದು ರಾಜಕೀಯ ಸ್ಟಂಟ್ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಲೇವಡಿ ಮಾಡಿದರು.
ಮುಂದೆ ಚುನಾವಣೆಯಲ್ಲಿ ನಿಲ್ಲಲು ಆಗುವುದಿಲ್ಲವೆನ್ನುವುದನ್ನು ಅರಿತಿರುವ ರಘುಆಚಾರ್ ಗಿಮಿಕ್ ಮಾಡುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಚಿತ್ರದುರ್ಗದ ಬಗ್ಗೆ ಕಾಳಜಿಯಿದ್ದರೆ ಸದನದ ಒಳಗೆ ಹೋರಾಡಿ ಹಣ ತಂದು ಜಿಲ್ಲೆಯ ಋಣ ತೀರಿಸಲಿ. ಸಂಸದರ ಕೊಡುಗೆ ಜಿಲ್ಲೆಗೆ ಶೂನ್ಯ, ಕೇಂದ್ರದ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಎಷ್ಟು ಸಭೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ಕೊಟ್ಟಿದ್ದಾರೆ. ಇವರಿಬ್ಬರು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗಿದ್ದಾರೆ. ಭದ್ರಾಮೇಲ್ದಂಡೆ ಯೋಜನೆ ಎನ್ನುವುದು ಕೆಲವರಿಗೆ ಸೈಡ್ ಸೀನ್ ಆಗಿದೆ. ತೋರಿಕೆ ರಾಜಕಾರಣವನ್ನು ಈಗಲಾದರೂ ಬಿಟ್ಟು ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಇಬ್ಬರನ್ನು ಮನೆಗೆ ಕಳಿಸುತ್ತೇವೆ. ಸಂಸದರು ತುಮಕೂರು ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗವನ್ನು ಯಾವಾಗಲೋ ಮಾಡಬಹುದಿತ್ತು. ಭೂಸ್ವಾಧೀನದ ಬಗ್ಗೆ ಎಷ್ಟು ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.ಇನ್ನು ಐದಾರು ತಿಂಗಳ ಅಧಿಕಾರವದಿಯಿದೆ ಅಷ್ಟರಲ್ಲಾದರೂ ಒಳ್ಳೆಯ ಕೆಲಸ ಮಾಡಿ ಕ್ಷೇತ್ರದ ಜನರ ವಿಶ್ವಾಸಗಳಿಸಲಿ ಎಂದು ತಾಕೀತು ಮಾಡಿದರು.