ಚಿತ್ರದುರ್ಗ: ಸಂವಿಧಾನ ಉಳಿಯಬೇಕಾದರೆ ಹಿಂದಿನ ವಚನಕಾರರ ಚಿಂತನೆ ತತ್ವಗಳು ಇಂದಿನ ಸಮಾಜಕ್ಕೆ ಪ್ರಸ್ತುವಾಗಿದೆ ಎಂದು ಹೋರಾಟಗಾರ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.
ಕೆ.ಇ.ಬಿ.ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಮಧುವರಸ ಶರಣ ಹರಳಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
೧೨ ನೇ ಶತಮಾನದಲ್ಲಿಯೂ ಜಾತಿಯತೆ ವಿರುದ್ದ ಮಧುವರಸ ಹರಳಯ್ಯ, ಬಸವಣ್ಣನವರು ಹೋರಾಟ ಮಾಡುತ್ತಿದ್ದರು. ಹಾಗಾಗಿ ದೇಶದಲ್ಲಿ ತಾಂಡವವಾಡತ್ತಿರುವ ಕೋಮುವಾದ, ಜಾತಿವಾದವನ್ನು ಹೋಗಲಾಡಿಸಬೇಕಾದರೆ ಹನ್ನೆರಡನೇ ಶತಮಾನದ ಶರಣರು ಹೇಳಿರುವ ವಿಚಾರಗಳನ್ನು ಪಾಲಿಸಬೇಕಾಗಿದೆ ಎಂದರು.
ನರೇಂದ್ರಮೋದಿ ದೇಶದ ಪ್ರಧಾನಿಯಾಗುವುದಕ್ಕೂ ಮೊದಲು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನು ಯುವಕರಿಗೆ ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಇದುವರೆವಿಗೂ ಯಾರ ಖಾತೆಗೂ ಲಕ್ಷ ಜಮಾ ಆಗಿಲ್ಲ. ನಿರುದ್ಯೋಗಿಗಳ ಕೈಗೆ ಉದ್ಯೋಗವೂ ಸಿಕ್ಕಿಲ್ಲ. ಇದನ್ನು ನೀವು ಪ್ರಶ್ನಿಸಬೇಕು ಎಂದು ಜನತೆಯನ್ನು ಜಾಗೃತಿಗೊಳಿಸಿದರು.
ಪ್ರಧಾನಿ ಮಹಾನ್ ಮೋಸಗಾರ ಎನ್ನುವುದನ್ನು ವಿದ್ಯಾರ್ಥಿಗಳು, ಕಾರ್ಮಿಕರು, ದಲಿತರು, ಮಹಿಳೆಯರು, ಸಾರ್ವಜನಿಕರು ಮೊದಲು ಅರ್ಥಮಾಡಿಕೊಳ್ಳಬೇಕು. ಗುಜರಾತ್‌ನಲ್ಲಿ ಜನ ನನ್ನನ್ನು ಆಶ್ಚರ್ಯಕರ ರೀತಿಯಲ್ಲಿ ಗೆಲ್ಲಿಸಿದ್ದಾರೆ. ಆದ್ದರಿಂದ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಹರಳಯ್ಯ, ಬಸವಣ್ಣನವರ ಚಿಂತನೆಗಳನ್ನು ಚಾಚೂ ತಪ್ಪದೆ ಜಾರಿಗೆ ತಂದಿದ್ದೇ ಆದಲ್ಲಿ ಅಂಬೇಡ್ಕರ್‌ರವರ ಸಂವಿಧಾನವನ್ನು ಉಳಿಸುವುದು ಕಷ್ಠವೇನಲ್ಲ. ೨೧ ಶತಮಾನದಲ್ಲಿ ದೇಶಾದ್ಯಂತ ಅನೇಕ ಚಳುವಳಿಗಳು ನಡೆಯುತ್ತಿವೆ. ಆದರೆ ೧೨ ನೇ ಶತಮಾನದಲ್ಲಿಯೇ ಶರಣರು ಚಳುವಳಿಗಳನ್ನು ಹುಟ್ಟು ಹಾಕಿದ್ದರು. ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುತ್ತಿರುವ ಸುಪ್ರೀಂಕೋರ್ಟ್ ತೀರ್ಪಿಗೆ ಆತಂಕ ವ್ಯಕ್ತಪಡಿಸಿದ ಜಿಗ್ನೇಶ್ ಮೇವಾನಿ ಸಂವಿಧಾನಕ್ಕೆ ಧಕ್ಕೆ ತರುವ ಯೋಜನೆಗಳನ್ನು ಜಾರಿಗೆ ತರಲು ಹೊರಟಿರುವ ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಹೇಳಿದರು.
ನಟ ಪ್ರಕಾಶ್‌ರೈ, ಮಾಜಿ ಸಚಿವೆ ಬಿ.ಟಿ.ಲಿಲಿತಾನಾಯ್ಕ, ಅನಿಸ್‌ಪಾಷ, ಟಿ.ಶಫಿವುಲ್ಲಾ ವೇದಿಕೆಯಲ್ಲಿದ್ದರು. ಬಸವ ಹರಳಯ್ಯ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮಿ ಸಾನಿಧ್ಯ ವಹಿಸಿದ್ದರು.