ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್‍ರವರು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನವನ್ನು ಬದಲಾವಣೆ ಮಾಡುವ ಚಿಂತನೆ ಬಿಜೆಪಿ.ಗೆ ಕನಸು ಮನಸಿನಲ್ಲಿಯೂ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ.ಲೋಕಸಭಾ ಚುನಾವಣಾ ಕಚೇರಿಯಲ್ಲಿ ಭಾನುವಾರ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಚುನಾವಣೆಯಲ್ಲಿ ಬಿಜೆಪಿ.ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೆ. ಸಂವಿಧಾನವನ್ನು ಬದಲಾವಣೆ ಮಾಡುವ ಸಂಕುಚಿತ ಮನೋಭಾವನೆ ಬಿಜೆಪಿ.ಗಿಲ್ಲ ಎಂಬುದನ್ನು ಮೊದಲು ವಿರೋಧಿಗಳು ಅರ್ಥಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಂವಿಧಾನಕ್ಕೆ ಅಪಚಾರವೆಸಗಿ ದೇಶ ವಿಭಜನೆಗೆ ಒತ್ತು ಕೊಟ್ಟವರು ಕಾಂಗ್ರೆಸ್‍ನವರು. ನಮ್ಮದು ಅಖಂಡ ಭಾರತದ ಸಂಕಲ್ಪ. ಪ್ರತಿಯೊಂದು ಜಾತಿ ಧರ್ಮದವರು ನೆಮ್ಮದಿಯಾಗಿ ಬದುಕಲು ದೇಶದ ಪ್ರಧಾನಿ ನರೇಂದ್ರಮೋದಿರವರು ಅವಕಾಶ ಕಲ್ಪಿಸಿದ್ದಾರೆ. ಕಾಂಗ್ರೆಸ್‍ನವರ ಅಪಪ್ರಚಾರಕ್ಕೆ ಕಿವಿಗೊಡದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ನರೇಂದ್ರಮೋದಿರವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವಂತೆ ಮನವಿ ಮಾಡಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ರತ್ನಮ್ಮ, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್. ಮಾಜಿ ಅಧ್ಯಕ್ಷರುಗಳಾದ ಟಿ.ಜಿ.ನರೇಂದ್ರನಾಥ್, ಸಿದ್ದೇಶ್‍ಯಾದವ್ ವೇದಿಕೆಯಲ್ಲಿದ್ದರು.